ಕರ್ನಾಟಕ

ಶೀಘ್ರದಲ್ಲಿಯೇ ಪೆಟ್ರೋಲ್ ದರ ಇಳಿಕೆ..?

Pinterest LinkedIn Tumblr


ಬೆಂಗಳೂರು: ಸಾಲ ಮನ್ನಾ ಯೋಜನೆಗಾಗಿ ತೈಲ ದರ ಹೆಚ್ಚಳ ಮಾಡುವ ನಿರ್ಧಾರ ತಿರುಗುಬಾಣವಾಗುವ ಲಕ್ಷಣ ಕಂಡು ಬಂದಿರುವ ಹಿನ್ನೆಲೆಯಲ್ಲಿ ಈ ಬೆಲೆ ಏರಿಕೆ ಹಿಂಪಡೆಯಲು ಸಾಧ್ಯವೇ ಎಂದು ಜೆಡಿಎಸ್ ಜತೆ ಚರ್ಚಿಸಲು ಕಾಂಗ್ರೆಸ್ ಚಿಂತಿಸಿದೆ. ಕೇಂದ್ರ ಸರ್ಕಾರವು ತೈಲೋತ್ಪನ್ನಗಳ ಬೆಲೆ ಹೆಚ್ಚಳ ಮಾಡುತ್ತಿದೆ ಎಂದು ಬೀದಿಗಿಳಿದು ಹೋರಾಟ ಮಾಡಿದ್ದ ಕಾಂಗ್ರೆಸ್ ಪಕ್ಷವೇ ಭಾಗಿದಾರ ಆಗಿರುವ ಸರ್ಕಾರವೇ ತೈಲ ದರ ಹೆಚ್ಚಳ ಮಾಡಿರುವುದು ಪಕ್ಷಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಹಿನ್ನಡೆ ಉಂಟು ಮಾಡುವ ಲಕ್ಷಣವಿರುವುದರಿಂದ ಈ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.

ಮೂಲಗಳ ಪ್ರಕಾರ, ರಾಜ್ಯ ಉಸ್ತುವಾರಿ ವೇಣು ಗೋಪಾಲ್ ಅವರು ಈ ವಿಚಾರದ ಬಗ್ಗೆ ಮುಖ್ಯ ಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಶೀಘ್ರವೇ ಚರ್ಚಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ತೈಲ ದರ ಹೆಚ್ಚಳದ ಬಗ್ಗೆ ತೀವ್ರ ವಿರೋಧವನ್ನು ಮಾಡುವ ಪರಿಸ್ಥಿತಿಯಲ್ಲೂ ಕಾಂಗ್ರೆಸ್ ಇಲ್ಲ. ಏಕೆಂದರೆ, ತೈಲ ದರ ಹಿಂಪಡೆಯುವಂತೆ ಕಾಂಗ್ರೆಸ್ ಪಟ್ಟು ಹಿಡಿದರೆ, ಸಾಲ ಮನ್ನಾ ಯೋಜನೆಗೆ ಇದು ಅಡ್ಡಿಯಾಗುತ್ತದೆ ಎಂದು ಜೆಡಿಎಸ್ ಬಿಂಬಿಸಬಹುದು.

ಆಗ ಕಾಂಗ್ರೆಸ್ ರೈತರ ಸಾಲಮನ್ನಾಗೆ ವಿರುದ್ಧವಿದೆ ಎಂಬ ಸಂದೇಶ ರವಾನೆಯಾಗುವ ಸಾಧ್ಯತೆಯಿದೆ. ಇಲ್ಲವೇ, ಹಿಂದಿನ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ್ದ ಜನಪ್ರಿಯ ಯೋಜನೆಗಳಿಗೆ ಕತ್ತರಿ ಹಾಕುವ ಪ್ರಸ್ತಾಪ ಮುಂದಿಡಬಹುದು. ಹೀಗಾಗಿ ಈ ವಿಚಾರದಲ್ಲಿ ಎಚ್ಚರಿಕೆ ಹೆಜ್ಜೆಯಿಡಲು ನಿರ್ಧರಿಸಿರುವ ಕಾಂಗ್ರೆಸ್, ತೈಲ ದರ ಹೆಚ್ಚಳದ ಹೊರತಾಗಿ ಬೇರ‌್ಯಾವ ಮೂಲಗಳಿಂದ ಸಂಪನ್ಮೂಲ ಕ್ರೋಡೀಕರಿಸಬಹುದು ಎಂಬ ಬಗ್ಗೆ ಮರು ಚಿಂತನೆ ನಡೆಸುವಂತೆ ಜೆಡಿಎಸ್‌ಗೆ ಒತ್ತಡವೇರುವ ಸಾಧ್ಯತೆಯಿದೆ ಎನ್ನಲಾಗಿದೆ.

ಮೂಲಗಳ ಪ್ರಕಾರ, ಸಾಲ ಮನ್ನಾ ಕುರಿತು ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ ನಡೆದಾಗಲೇ ಕೆಲ ಬಾಬ್ತುಗಳಲ್ಲಿ ತೆರಿಗೆ ಹೆಚ್ಚಳ ಮಾಡಬೇಕಾಗುತ್ತದೆ ಎಂಬ ಸುಳಿವನ್ನು ಜೆಡಿಎಸ್ ನಾಯಕತ್ವ ಕಾಂಗ್ರೆಸ್ ನಾಯಕರಿಗೆ ನೀಡಿತ್ತು ಎನ್ನಲಾಗಿದೆ. ಆದರೆ, ಸ್ವಷ್ಟವಾಗಿ ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಳ ಮಾಡುವ ಬಗ್ಗೆ ತಿಳಿಸಿರಲಿಲ್ಲ. ಇದನ್ನು ನೆಪ ಮಾಡಿಕೊಂಡು ಕಾಂಗ್ರೆಸ್, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಳಕ್ಕೆ ನಮ್ಮ ಒಪ್ಪಿಗೆ ಇರಲಿಲ್ಲ ಎಂದು ಬಿಂಬಿಸಲು ಮುಂದಾಗಿದೆ ಎನ್ನಲಾಗಿದೆ. ರಾಹುಲ್ ಈ ಹಿಂದೆ ಪೆಟ್ರೋಲ್ ದರ ಹೆಚ್ಚಳ ವಿರೋಧಿಸಿದ್ದರು.

Comments are closed.