ಕರ್ನಾಟಕ

ದಿನವೂ 170 ಕಿ.ಮೀ ಪ್ರಯಾಣಿಸಿ ಬೆಂಗಳೂರಿಗೆ ಬಂದು ತಂಗುವ ರೇವಣ್ಣ !

Pinterest LinkedIn Tumblr


ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಮನೆ ಇದ್ದರೂ ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಅವರು ಪ್ರತಿನಿತ್ಯ ಹೊಳೆನರಸೀಪುರಕ್ಕೆ ಹೋಗಿ ಬೆಳಗಾಗುತ್ತಿದ್ದಂತೆ ಬೆಂಗಳೂರಿಗೆ ವಾಪಸಾಗುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಬೆಂಗಳೂರಿನಿಂದ ಹೊಳೆನರಸೀಪುರ 170 ಕಿ.ಮೀ. ದೂರವಿದೆ. ರಾತ್ರಿಯಾಗುತ್ತಿದ್ದಂತೆ ಹೊಳೆನರಸೀಪುರ ತಲುಪುವ ರೇವಣ್ಣ, ತಮ್ಮ ಸ್ವಂತ ಮನೆಯಲ್ಲಿ ವಾಸ್ತವ್ಯ ಹೂಡಿ ಬೆಳಗ್ಗೆ ಜನರ ಅಹವಾಲು ಆಲಿಸಿ ಬೆಂಗಳೂರಿಗೆ ಮರಳುತ್ತಿದ್ದಾರೆ.

ವಾಸ್ತುಶಾಸ್ತ್ರ ಮತ್ತು ಜ್ಯೋತಿಷ್ಯವನ್ನು ಅತಿಯಾಗಿ ನಂಬುವ ರೇವಣ್ಣ ಅವರಿಗೆ ಜ್ಯೋತಿಷಿಯೊಬ್ಬರು ಸರ್ಕಾರಿ ಬಂಗಲೆ ಸಿಗುವವರೆಗೂ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡದಂತೆ ಸಲಹೆ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಇದನ್ನು ನಿರಾಕರಿಸುವ ಅವರ ಆಪ್ತಬಳಗ, ಕ್ಷೇತ್ರದ ಜನರ ಅಹವಾಲುಗಳನ್ನು ಸ್ವೀಕರಿಸುವ ಸಲುವಾಗಿ ರೇವಣ್ಣ ಪ್ರತಿನಿತ್ಯ ಓಡಾಟ ನಡೆಸುತ್ತಿದ್ದಾರಷ್ಟೇ ಎಂದು ಹೇಳುತ್ತದೆ.

ಸಚಿವ ರೇವಣ್ಣನವರ ಕೋರಿಕೆಯಂತೆ ಅವರಿಗೆ ಬೆಂಗಳೂರಿನ ಶಿವಾನಂದ ವೃತ್ತದ ಬಳಿ ಮಾಜಿ ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪನವರು ಇದ್ದ ಸರ್ಕಾರದ ವಸತಿಗೃಹವನ್ನು ನೀಡಲಾಗಿದೆ. ಆದರೆ ಮಾಜಿ ಸಚಿವರು ಆ ಮನೆಯನ್ನು ಖಾಲಿ ಮಾಡುವವರೆಗೆ ಬೆಂಗಳೂರಿನ ಅವರ ಸ್ವಂತ ಮನೆಯಲ್ಲಿ ವಾಸಿಸಬಹುದಾದರೂ ರೇವಣ್ಣ ಮಾತ್ರ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಪ್ರತಿನಿತ್ಯ ಬೆಂಗಳೂರಿನಿಂದ ಹೊಳೆನರಸೀಪುರ, ಹೊಳೆನರಸೀಪುರದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಲೇ ಇದ್ದಾರೆ.

ರಾತ್ರಿ ಎಷ್ಟುಹೊತ್ತಾದರೂ ಬೆಂಗಳೂರಿನಿಂದ ಹೊಳೆನರಸೀಪುರದ ಮನೆಗೆ ರೇವಣ್ಣ ತಲುಪುತ್ತಾರೆ. ಎಷ್ಟುಹೊತ್ತಿಗೆ ತಲುಪಿದರೂ ಬೆಳಗ್ಗೆ ಆರು ಗಂಟೆಗೇ ಎದ್ದು ಪ್ರಾತಃವಿಧಿಗಳನ್ನು ಪೂರೈಸಿ ಜನರ ಅಹವಾಲುಗಳನ್ನು ಕೇಳಲು ತಯಾರಾಗುತ್ತಾರೆ. ಹೊಳೆನರಸೀಪುರ ಕ್ಷೇತ್ರ ಮಾತ್ರವಲ್ಲದೆ ಹಾಸನ ಜಿಲ್ಲೆಯ ಮೂಲೆಮೂಲೆಗಳಿಂದ ಪ್ರತಿನಿತ್ಯ ಸುಮಾರು ಎರಡರಿಂದ ಎರಡೂವರೆ ಸಾವಿರದಷ್ಟುಮಂದಿ ಅವರ ಮನೆಗೆ ಬರುತ್ತಾರೆ. ಎಲ್ಲರ ಅಹವಾಲು ಸ್ವೀಕರಿಸಿ, ಸ್ಪಂದಿಸುವ ರೇವಣ್ಣ ಮತ್ತೆ ಬೆಂಗಳೂರಿನತ್ತ ಮುಖಮಾಡಬೇಕಾದರೆ ಬೆಳಗ್ಗೆ ಎಂಟೂವರೆಯಿಂದ ಒಂಬತ್ತು ಗಂಟೆಯಾಗುತ್ತದೆ. ಕ್ಷೇತ್ರದ ಜನರ ಅಗತ್ಯಗಳಿಗೆ ಸ್ಪಂದಿಸಬೇಕೇಂಬ ತುಡಿತವೇ ರೇವಣ್ಣನವರು ಈ ಪ್ರಯಾಣಕ್ಕೆ ಕಾರಣ ಎಂಬುದೇ ಅವರ ಆಪ್ತಮೂಲಗಳ ಬಲವಾದ ಅಂಬೋಣ.

ಹಿಂದೆ ಎರಡೆರಡು ಬಾರಿ ಪ್ರಯಾಣ..!

ಹಿಂದೆ ಜೆಡಿಎಸ್‌-ಬಿಜೆಪಿ 20 ತಿಂಗಳ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಎಚ್‌.ಡಿ.ರೇವಣ್ಣನವರು, ಒಂದೇ ದಿನದಲ್ಲಿ ಹಾಸನದಿಂದ ಬೆಂಗಳೂರಿಗೆ ತೆರಳಿ ಮತ್ತೆ ಮಧ್ಯಾಹ್ನ ಹಾಸನಕ್ಕೆ ಬಂದು ಸಂಜೆವೇಳೆ ಮತ್ತೆ ಬೆಂಗಳೂರಿಗೆ ತೆರಳಿ ನಂತರ ರಾತ್ರಿ ಹಾಸನಕ್ಕೆ ಬಂದು ವಾಸ್ತವ್ಯ ಮಾಡಿರುವಂತಹ ಉದಾಹರಣೆಗಳಿವೆ. ಇದೀಗ ಎಲ್ಲವೂ ಉಲ್ಟಾ. ವಾಸ್ತುಶಾಸ್ತ್ರ ಮತ್ತು ಜ್ಯೋತಿಷಿಗಳ ಸೂಚನೆಯೇ ಕಾರಣ ಎಂದಾದಲ್ಲಿ ಮಹಾದೇವಪ್ಪನವರು ಸರ್ಕಾರಿ ವಸತಿಗೃಹ ಖಾಲಿ ಮಾಡುವ ತನಕ ರೇವಣ್ಣನವರ ಪ್ರತಿನಿತ್ಯದ ಸುಮಾರು 350 ಕಿ.ಮೀ. ಪ್ರಯಾಣ ನಿಶ್ಚಿತ ಎನ್ನಲಾಗಿದೆ.

Comments are closed.