ಕರ್ನಾಟಕ

ಕಸದ ರಾಶಿಯಲ್ಲಿ ಸಿಕ್ಕ ಅನಾಥ ಮಗುವನ್ನು ಆರೈಕೆ ಮಾಡಿದ ಮಹಿಳಾ ಪೇದೆಗೆ ಸನ್ಮಾನ

Pinterest LinkedIn Tumblr


ಬೆಂಗಳೂರು: ಕಸದ ರಾಶಿಯಲ್ಲಿ ಸಿಕ್ಕ ಅನಾಥ ಮಗುವನ್ನು ಅಕ್ಕರೆಯಿಂದ ಆರೈಕೆ ಮಾಡಿ ಮಾನವೀಯತೆ ಮೆರೆದ ವೈಟ್‌ ಫೀಲ್ಡ್‌ ಪೊಲೀಸ್‌ ಠಾಣೆ ಪೇದೆ ಅರ್ಚನಾ ಅವರಿಗೆ ಶನಿವಾರ ಬಿಬಿಎಂಪಿ ವತಿಯಿಂದ ಸನ್ಮಾನಿಸಲಾಯಿತು.

ಜೂ.1ರಂದು ಕಸದ ರಾಶಿಯಲ್ಲಿ ಜೀವಂತ ಮಗು ಇರುವ ವಿಷಯ ತಿಳಿದು ಸ್ಥಳಕ್ಕೆ ತೆರಳಿದ್ದ ಅರ್ಚನಾ ಅವರು, ಮಗುವಿಗೆ ಎದೆಹಾಲುಣಿಸಿ ಆರೈಕೆ ಮಾಡಿದ್ದರು. ಆ ಹಿನ್ನೆಲೆಯಲ್ಲಿ ಶನಿವಾರ ಅವರಿಗೆ ಪಾಲಿಕೆಯಿಂದ ಗೌರವ ಪದಕ ಹಾಗೂ ಮೇಯರ್‌ ಸಂಪತ್‌ರಾಜ್‌ ಅವರು ವಯಕ್ತಿಕವಾಗಿ 10 ಸಾವಿರ ನಗದು ಹಾಗೂ ಸೀರೆ ಕೊಟ್ಟು ಗೌರವಿಸಿದರು.

ಪ್ರಶಸ್ತಿ ಭರವಸೆ: ನಂತರ ಮಾತನಾಡಿದ ಮೇಯರ್‌ ಸಂಪತ್‌ರಾಜ್‌, ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಸಂದರ್ಭದಲ್ಲಿ ಅರ್ಚನಾ ಅವರ ಈ ಮಾದರಿ ಕಾರ್ಯ ಎಲ್ಲರೂ ಮೆಚ್ಚುವಂತದ್ದು. ಹೀಗಾಗಿ ಪ್ರಸಕ್ತ ಸಾಲಿನ “ನಾಡಪ್ರಭು ಕೆಂಪೇಗೌಡ ಪ್ರಶಸ್ತಿ’ಯನ್ನು ಪ್ರಥಮ ಆದ್ಯತೆ ಮೇಲೆ ಅವರಿಗೆ ನೀಡಲಾಗುವುದು ಎಂದು ಘೋಷಿಸಿದರು.

ಪಾಲಿಕೆಯಿಂದ ಗೌರವ ಸ್ವೀಕರಿಸಿ ಮಾತನಾಡಿದ ಪೊಲೀಸ್‌ ಪೇದೆ ಅರ್ಚನಾ, “ಮಗುವನ್ನು ಯಾರೋ ಕಸದ ರಾಶಿಗೆ ಎಸೆದು ಹೋಗಿದ್ದರು. ಮಗು ನರಳಾಟ ನೋಡಿ ಮನಸ್ಸಿಗೆ ನೋವಾಯಿತು. ಮಗುವಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಿ, ಸ್ವಂತ ಕಂದನಂತೆ ನೋಡಿಕೊಂಡರೂ ಉಳಿಸಿಕೊಳ್ಳಲಾಗಲಿಲ್ಲ,’ ಎಂದು ಬೇಸರ ವ್ಯಕ್ತಪಡಿಸಿದರು. ಈ ವೇಳೆ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಗಂಗಮ್ಮ ಹಾಜರಿದ್ದರು.

Comments are closed.