
ಬೆಂಗಳೂರು: ಗೌರಿ ಹತ್ಯೆ ಪ್ರಕರಣದ ತನಿಖೆ ಸಂದರ್ಭದಲ್ಲಿ ಸ್ಫೋಟಕ ಮಾಹಿತಿಗಳು ಬಹಿರಂಗವಾಗುತ್ತಿದ್ದು, ಪ್ರತ್ಯೇಕ
ಲಿಂಗಾಯತ ಧರ್ಮದ ಹೋರಾಟದ ಮುಂಚೂಣಿಯಲ್ಲಿದ್ದ ಮಾಜಿ ಸಚಿವರಾದ ಎಂ.ಬಿ.ಪಾಟೀಲ್ ಹಾಗೂ ವಿನಯ
ಕುಲಕರ್ಣಿ ಅವರ ಹತ್ಯೆಗೂ ಆರೋಪಿಗಳು ಸಂಚು ರೂಪಿಸಿದ್ದರೆಂಬ ವಿಚಾರ ಪತ್ತೆಯಾಗಿದೆ.
ಗೌರಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮನೋಹರ್ ಯವಡೆ, ಪ್ರವೀಣ್, ಅಮೋಳ್ ಕಾಳೆ,
ಅಮಿತ್ ದೇಗ್ವೇಕರ್ ಬಳಿ ಪತ್ತೆಯಾದ ಡೈರಿಗಳಲ್ಲಿ ಉತ್ತರ ಕರ್ನಾಟಕ ಭಾಗದ ಪ್ರಭಾವಿ ರಾಜಕೀಯ ಮುಖಂಡರಾದ ಎಂ.ಬಿ.ಪಾಟೀಲ್, ವಿನಯ್ ಕುಲಕರ್ಣಿ ಅವರ ಹೆಸರು ಹತ್ಯೆ ಮಾಡುವ ಹಿಟ್‌ಲಿಸ್ಟ್‌ನಲ್ಲಿ ಇದ್ದವು ಎಂದು ಮೂಲಗಳು ತಿಳಿಸಿವೆ.
ಎಂ.ಬಿ.ಪಾಟೀಲ್ ಮತ್ತು ವಿನಯ್ ಕುಲಕರ್ಣಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಈ
ಮೂಲಕ ಸಾವಿರಾರು ವರ್ಷಗಳ ಇತಿಹಾಸ ಇರುವ ಹಿಂದೂ ಧರ್ಮವನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಒಡೆಯುವ
ಹುನ್ನಾರ ನಡೆಸಿದ್ದಾರೆಂದು ತಮ್ಮೊಳಗೆ ಮಾತನಾಡಿಕೊಂಡಿದ್ದ ಆರೋಪಿಗಳು ಒಮ್ಮೆ ಸಭೆ ಸೇರಿ ಈ ನಾಯಕರ ಹತ್ಯೆ ಕುರಿತು ಚರ್ಚೆ ನಡೆಸಿದ್ದರೆಂದು ಹೇಳಲಾಗಿದೆ.
ಆದರೆ, ಯಾವ ರೀತಿ ಹೇಗೆ ಎಂಬ ಬಗ್ಗೆ ಕಾರ್ಯಯೋಜನೆ ರೂಪಿಸಿರಲಿಲ್ಲ. ಗೌರಿ ಹತ್ಯೆಯಾದ ಬಳಿಕ ಗೌರಿಯಂತೆಯೇ ಈ ಇಬ್ಬರೂ ನಾಯಕರನ್ನು ದೇವರ ಬಳಿ ಕಳುಹಿಸಬೇಕು. ಧರ್ಮವನ್ನು ಒಡೆದು ಆಳಲು ಹುನ್ನಾರ ನಡೆಸುವವರು ಈ ಭೂಮಿ ಮೇಲೆ ಇರಬಾರದು. ಹೀಗಾಗಿ ಹತ್ಯೆ ಮಾಡಬೇಕೆಂದು ನಿರ್ಧರಿಸಿದ್ದರು ಎಂಬುದನ್ನು ವಿಚಾರಣೆ ಸಂದರ್ಭದಲ್ಲಿ ತಿಳಿದು ಬಂದಿರುವುದಾಗಿ ಎಸ್‌ಐಟಿ ಮೂಲಗಳು ತಿಳಿಸಿವೆ.
ಆರೋಪಿಗಳ ವಿಚಾರಣೆ ಸಂದರ್ಭದಲ್ಲಿ ಕೋಡ್ ವರ್ಡ್‌ಗಳಲ್ಲಿ ರಾಜ್ಯದ ಎಡಪಂಥಿಯ ಚಿಂತನೆ ಹೊಂದಿದ್ದ ಸ್ವಾಮೀಜಿಗಳು, ವಿಚಾರ ವಾದಿಗಳ ಹತ್ಯೆಗೆ ಪಟ್ಟಿ ಸಿದಟಛಿಪಡಿಸಿದ್ದ ಬಗ್ಗೆ ವಿಚಾರಣೆ ಸಂದರ್ಭದಲ್ಲಿ ಬಹಿರಂಗಗೊಂಡಿತ್ತು. ಇದೀಗ ಎಂ.ಬಿ.ಪಾಟೀಲ್, ವಿನಯ್ ಕುಲಕರ್ಣಿ ಅವರ ಹತ್ಯೆಗೆ ಸಂಚು ರೂಪಿಸಿದ್ದರೆಂಬ ವಿಷಯ ರಾಜಕೀಯವಲಯ ದಲ್ಲಿಯೂ ಆತಂಕಕ್ಕೆ ಕಾರಣವಾಗಿದೆ.
ನನ್ನ ಹತ್ಯೆಗೂ ಸಂಚು ರೂಪಿಸಿದ್ದರು ಎಂಬ ವರದಿ ಅತ್ಯಂತ ಸೂಕ್ಷ್ಮ ವಿಷಯವಾಗಿರುವುದರಿಂದ ಈ ಬಗ್ಗೆ ನಾನೇನನ್ನೂ ಹೇಳಲು ಬಯಸುವುದಿಲ್ಲ. ಎಸ್‌ಐಟಿ ತನಿಖೆಯ ಸಂದರ್ಭದಲ್ಲಿ ಎಲ್ಲವೂ ತಿಳಿಯಲಿದೆ.
– ಎಂ.ಬಿ. ಪಾಟೀಲ್, ಕಾಂಗ್ರೆಸ್ ಶಾಸಕ
Comments are closed.