ಕರ್ನಾಟಕ

ಗೌರಿ ಲಂಕೇಶ್ ಹತ್ಯೆ ನಂತರ ಹಂತಕರ ಪಟ್ಟಿಯಲ್ಲಿ ಈ ನಾಲ್ವರು ಗಣ್ಯರು?

Pinterest LinkedIn Tumblr


ಬೆಂಗಳೂರು: ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಗೆ ಗ್ರಾಸವಾಗಿದ್ದ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ತನಿಖೆಯಲ್ಲಿ ಸ್ಫೋಟಕ ಮಾಹಿತಿಗಳು ಹೊರಬೀಳುತ್ತಲೇ ಇವೆ.

ಸದ್ಯ ಬಂಧನಕ್ಕೊಳಗಾಗಿರುವ ಆರೋಪಿಗಳ ಎಸ್‌ಐಟಿ ತನಿಖೆ ವೇಳೆ ಗೌರಿ ಹತ್ಯೆ ನಂತರ ಹಂತಕರ ಲಿಸ್ಟ್‌ನಲ್ಲಿ ಮತ್ತೆ ನಾಲ್ವರ ಹತ್ಯೆಗೆ ಸ್ಕೆಚ್‌ ರೂಪಿಸಲಾಗಿತ್ತು ಎನ್ನಲಾಗಿದೆ.

ಗೌರಿ ಹತ್ಯೆಗೂ ಮೊದಲೇ ಸಾಹಿತಿ ಗಿರೀಶ್ ಕಾರ್ನಾಡ್ ಕೊಲೆಗೆ ಸಂಚು ರೂಪಿಸಲಾಗಿತ್ತು. ಆದರೆ, ಕಾರಣಾಂತರಗಳಿಂದ ಗಿರೀಶ್ ಕಾರ್ನಾಡ್ ಟಾರ್ಗೆಟ್ ಮಿಸ್ಸಾಗಿತ್ತು. ಇದಾದ ಬಳಿಕ ಚಿಂತಕ ದ್ವಾರಕಾನಾಥ, ಚಿಂತಕಿ ಬಿ.ಟಿ.ಲಲಿತಾ ನಾಯಕ್ ಮತ್ತು ನಿಡುಮಾಮಿಡಿ ಸ್ವಾಮೀಜಿ ಕೂಡ ಹಂತಕರ ಹಿಟ್ ಲಿಸ್ಟ್​ನಲ್ಲಿದ್ದರು ಎನ್ನುವ ಬೆಚ್ಚಿ ಬೀಳಿಸುವ ಸಂಗತಿಗಳು ಹೊರ ಬರುತ್ತಿವೆ.

ಆರೋಪಿಗಳ ಡೈರಿಯಲ್ಲಿ ನಾಲ್ವರನ್ನು ಟಾರ್ಗೆಟ್ ಮಾಡಿದ್ದರ ಬಗ್ಗೆ ಉಲ್ಲೇಖಿಸಲಾಗಿದ್ದು, ಈ ಎಲ್ಲ ಮಾಹಿತಿ ಮರಾಠಿ ಭಾಷೆಯ ಕೋಡ್ ​ವರ್ಡ್​​ನಲ್ಲಿತ್ತು ಎನ್ನಲಾಗಿದೆ. SIT ತನಿಖೆ ವೇಳೆ ಕೋಡ್​​ ವರ್ಡ್ ಡಿಕೋಡ್ ಮಾಡಿದಾಗ ಸತ್ಯ ಬಯಲಾಗಿದೆ.

ಬಂಧಿತ ವಾಗ್ಮೋರೆ ಎತ್ತರದ ಬಗ್ಗೆಯೂ ತನಿಖೆ

ಗೌರಿ ಹತ್ಯೆಗೆ ಸಂಬಂಧಿಸಿದಂತೆ ಹಲವು ಆಯಾಮಗಳಲ್ಲಿ ತನಿಖೆ ಮುಂದುವರಿಸಿರುವ SIT ಬಂಧಿತ ಪರಶುರಾಮ್ ವಾಗ್ಮೊರೆ ಕುರಿತಾಗಿ ಸಿಸಿಟಿವಿ ದೃಶ್ಯಾವಳಿಗಳ ಇಂಚಿಂಚೂ ಪರಿಶೀಲನೆ ನಡೆಸಿದೆ. ನವೀನ್‌ನ ಹಿಂಬದಿ ಸವಾರನಾಗಿ ಪ್ರಯಾಣಿಸಿರುವ ವ್ಯಕ್ತಿಗೂ, ಆರೋಪಿ ಪರಶುರಾಮ್‌ ವಾಗ್ಮೋರೆಗೂ ಸಾಮ್ಯತೆ ಇದೆ ಎನ್ನಲಾಗಿದೆ.

ದೃಶ್ಯಾವಳಿಯಲ್ಲಿ 5.2 ಅಡಿ ಎತ್ತರವಿರುವ ಪರಶುರಾಮ್‌, ನಿಜವಾಗಿ 5.4 ಅಡಿ ಎತ್ತರ ಎನ್ನಲಾಗಿದೆ. ಪರಶುರಾಮ್‌ ಸುಂಕದಕಟ್ಟೆಯ ಸುರೇಶ್‌ ಎಂಬಾತನ ಮನೆಯಲ್ಲಿ ಆಶ್ರಯ ಪಡೆದಿದ್ದ. ಆರೋಪಿಗಳಿಗೆ ನವೀನ್‌ ಮನೆ ಬಾಡಿಗೆಗೆ ಕೊಡಿಸಿದ್ದ. 2017ರ ಸೆ.5 ರಂದು ಮನೆ ಖಾಲಿ ಮಾಡಿದ್ದ ಪರಶುರಾಮ್‌, ಮಧ್ಯಪ್ರದೇಶ, ಮಹಾರಾಷ್ಟ್ರದ ಕಡೆ ತೆರಳಿದ್ದ. ಚಾರ್ಜ್‌ಶೀಟ್‌ ಸಲ್ಲಿಸುವವರೆಗೂ ಕರ್ನಾಟಕಕ್ಕೆ ವಾಪಸ್‌ ಬಂದಿರಲಿಲ್ಲ. ಟೈಗರ್‌ ಗ್ಯಾಂಗ್‌ನ ಸಕ್ರಿಯ ಸದಸ್ಯನಾಗಿರುವ ಪರಶುರಾಮ್ ವಾಗ್ಮೋರೆಯೇ ಕೃತ್ಯ ನಡೆಸಿರಬಹುದು ಎನ್ನುವ ಅನುಮಾನ ತನಿಖೆ ವೇಳೆ ಹೆಚ್ಚಾಗುತ್ತಿದೆ.

Comments are closed.