ಕರ್ನಾಟಕ

ಲೈಂಗಿಕ ಕಾರ್ಯಕರ್ತರನ್ನು ಇನ್ನು ಮೇಲೆ ಏನೆಂದು ಕರೆಯಬೇಕೆಂದು ಜಯಮಾಲಾ ಸೂಚಿಸಿದ್ದಾರೆ ಗೊತ್ತಾ?

Pinterest LinkedIn Tumblr

ಬೆಂಗಳೂರು : ಸೆಕ್ಸ್ ವರ್ಕರ್ಸ್ ಪದಕ್ಕೆ ಪರ್ಯಾಯವಾಗಿ ಇನ್ನು ಮುಂದೆ ದಮನಿತ ಮಹಿಳೆಯರು ಎಂದು ಕರೆಯುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಚಿವರಾದ ನಂತರ ಪ್ರಥಮ ಬಾರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಮುಂದಿನ ಐದು ವರ್ಷಗಳಲ್ಲಿ ಮಹಿಳೆಯರ ಅಭ್ಯುದ ಯಕ್ಕೆ ಯಾವ ಯೋಜನೆಗಳು ಇದ್ದರೆ ಉತ್ತಮ ಎಂಬುದರ ಕುರಿತು ಶೀಘ್ರವೇ ಮಾಹಿತಿ ನೀಡಬೇಕು.

ಇಲಾಖೆಯಲ್ಲಿ ಶೋಷಿತ ಮಹಿಳೆಯರು, ಮಕ್ಕಳ ಕುರಿತು ನಿರ್ಲಕ್ಷ್ಯ ವಹಿಸಬಾರದು. ಅಗತ್ಯ ಸಂದರ್ಭದಲ್ಲಿ ಎಲ್ಲ ರೀತಿಯ ನೆರವು ನೀಡಲು ಅಧಿಕಾರಿಗಳು ಸಿದ್ಧರಿರಬೇಕು ಎಂದು ಸೂಚನೆ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಕಲಾವಿದರ ಮಾಸಾಶನ ಹೆಚ್ಚಳ ಮಾಡುವ ಕುರಿತು ಪರಿಶೀಲನೆ ಮಾಡಿ ಶೀಘ್ರವೇ ಪ್ರಸ್ತಾವನೆ ಸಲ್ಲಿಸಬೇಕು.

ಜತೆಗೆ ಇಲಾಖೆಯಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಅಧಿಕಾರಿಗಳು ತಮ್ಮ ಗಮನಕ್ಕೆ ತರ ಬೇಕು. ಜನರ ಸಮಸ್ಯೆಗಳನ್ನು ನಿರ್ಲಕ್ಷಿಸದೆ ಸ್ಪಂದಿಸಬೇಕು ಎಂದರು. ಲಿಂಗತ್ವ ಅಲ್ಪಸಂಖ್ಯಾತರಿಗಾಗಿ ರೂಪಿಸಿರುವ ಕಾರ್ಯಕ್ರಮಗಳು ಆ ಸಮುದಾಯಕ್ಕೆ ಸರಿಯಾಗಿ ತಲುಪುತ್ತಿಲ್ಲ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗಿ ಆಯಾ ಫಲಾನುಭವಿಗಳಿಗೆ ಯೋಜನೆ ಫಲ ಸಿಗುವಂತೆ ಕ್ರಮ ಕೈಗೊಳ್ಳಬೇಕು. ಅವರ ಕೋರಿಕೆಯಂತೆ ಅಲ್ಪ ಸಂಖ್ಯಾತ ಆಯೋಗ ರಚನೆಯ ಸಾಧಕ, ಬಾಧಕಗಳ ಕುರಿತು ಮಾಹಿತಿ ನೀಡುವಂತೆ ಸಭೆಯಲ್ಲಿ ಸಚಿವರು ಸೂಚಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಚಕ್ರವರ್ತಿ ಮೋಹನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕಿ ದೀಪಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ವಿಶುಕುಮಾರ್ ಸೇರಿ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.