ಬೆಂಗಳೂರು: 11 ತಿಂಗಳ ಮಗುವೊಂದು ಜೀವಂತ ಮೀನು ನುಂಗಿದ ಪ್ರಸಂಗ ಬೆಂಗಳೂರಿನಲ್ಲಿ ವರದಿಯಾಗಿದೆ. ಅದೃಷ್ಟವಶಾತ್ ಮಗು ಪ್ರಾಣಾಪಾಯದಿಂದ ಬಚಾವಾಗಿದೆ.
ಅಚಾನಕ್ ಆಗಿ ಉಸಿರಾಟದ ಸಮಸ್ಯೆಯಿಂದ ಬಳಲತೊಡಗಿದ ಮಗುವನ್ನು ತಂದೆ- ತಾಯಿ ಕೊಲಂಬಿಯಾ- ಏಷ್ಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರೀಕ್ಷಿಸಿದ ವೈದ್ಯರಿಗೆ ಮಗು 5-6 ಸೆಂ.ಮೀ ಮೀನು ನುಂಗಿರುವುದು ಕಂಡುಬಂದಿದೆ. ಮೀನು ಗಂಟಲಲ್ಲಿ ಸಿಕ್ಕಿ ಹಾಕಿಕೊಂಡಿದ್ದರಿಂದ ಮಗು ಉಸಿರಾಡಲು ಪರದಾಡುತ್ತಿತ್ತು.
ಆಸ್ಪತ್ರೆಗೆ ಕರೆ ತಂದಾಗ ಮಗುವಿನ ದೇಹ ನೀಲಿ ಬಣ್ಣಕ್ಕೆ ತಿರುಗಿದ್ದು, ಇನ್ನೇನು ಪ್ರಾಣ ಪಕ್ಷಿ ಹಾರಿ ಹೋಗಬೇಕೆನ್ನುವಷ್ಟರಲ್ಲಿ ಎಂಡೋಸ್ಕೋಪಿ ಮೂಲಕ ಮೀನನ್ನು ಹೊರತೆಗೆದು ಮಗುವನ್ನು ಉಳಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.
ಮೀನನ್ನು ತುಂಡು ತುಂಡಾಗಿಸಿ ಕತ್ತರಿಸಿ ಹೊರತೆಗೆಯಲಾಯಿತು. ತೀವ್ರ ಅಸ್ವಸ್ಥತೆಗೆ ಜಾರಿದ್ದ ಮಗುವಿಗೆ ವೆಂಟಿಲೇಟರ್ ಅಳವಡಿಸಿ, ಪೂರಕ ಔಷಧಿಗಳನ್ನೊದಗಿಸಿದ ಬಳಿಕ ಚೇತರಿಸಿಕೊಂಡಿತು. ಎರಡು ದಿನಗಳ ಕಾಲ ತುರ್ತು ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಿದ ಬಳಿಕ ಸುಧಾರಿಸಿಕೊಂಡ ಮಗು ಸಹಜ ಸ್ಥಿತಿಗೆ ಮರಳಿತು. ಬಳಿಕವಷ್ಟೇ ಮಗುವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು, ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಜೀವಂತ ಮೀನು ಸಿಕ್ಕಿದೆಲ್ಲಿಂದ
ಮನೆಯಲ್ಲಿ ಅಕ್ವೇರಿಯಂಗೆ ಕೈ ಹಾಕಿದ್ದ ಮಗು ಮೀನನ್ನು ಹಿಡಿದು ನುಂಗಿತ್ತು ಎಂದು ತಿಳಿದು ಬಂದಿದೆ.
Comments are closed.