ಕರ್ನಾಟಕ

ಪ್ಯಾಂಟ್ ನಲ್ಲಿ ಹಾವು ಸೇರಿರುವ ವಿಚಾರ ತಿಳಿಯದೇ ವ್ಯಕ್ತಿಯೋರ್ವ ಬರೊಬ್ಬರಿ ಅರ್ಧ ಗಂಟೆ ಬೈಕ್ ಚಲಾಯಿಸಿದ !

Pinterest LinkedIn Tumblr

ಗದಗ: ತಾನು ತೊಟ್ಟಿದ್ದ ಪ್ಯಾಂಟ್ ನಲ್ಲಿ ಹಾವು ಸೇರಿರುವ ವಿಚಾರ ತಿಳಿಯದೇ ವ್ಯಕ್ತಿಯೋರ್ವ ಬರೊಬ್ಬರಿ ಅರ್ಧ ಗಂಟೆ ಬೈಕ್ ಚಲಾಯಿಸಿದ ಘಟನೆ ಕರ್ನಾಟಕದ ಗದಗದಲ್ಲಿ ನಡೆದಿದೆ.

ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನ ಹೊಟೆಲ್ ಮಾಲೀಕ ವೀರೇಶ್ ಕಡೇಮನಿ (32 ವರ್ಷ) ಎಂಬಾತನೇ ಅಪಾಯದಿಂದ ಪಾರಾದ ವ್ಯಕ್ತಿಯಾಗಿದ್ದಾನೆ. ವೀರೇಶ್ ಮಾರ್ಕೆಟ್ ಗೆ ತೆರಳುವುದಕ್ಕಾಗಿ ತನ್ನ ಬೈಕ್ ಸ್ಟಾರ್ಟ್ ಮಾಡಿದ್ದಾನೆ. ಈ ವೇಳೆ ಬೈಕ್ ನ ಸೈಲೆನ್ಸರ್ ನಲ್ಲಿ ಹಾವು ಸೇರಿರುವ ವಿಚಾರ ಆತನಿಗೆ ತಿಳಿದಿಲ್ಲ. ಬೈಕ್ ಸ್ಟಾರ್ಟ್ ಆಗುತ್ತಿದ್ದಂತೆಯೇ ಸೆಲೆನ್ಸರ್ ತಾಪಮಾನ ಏರಿದ ಪರಿಣಾಮ ಹಾವು ದಿಢೀರ್ ಸೈಲೆನ್ಸರ್ ನಿಂದ ಹೊರಬಂದ ಹಾವು ಬೈಕ್ ಸವಾರ ವೀರೇಶ್ ಪ್ಯಾಂಟ್ ಹೊಕ್ಕಿದೆ.

ಈ ವಿಚಾರ ತಿಳಿಯದ ವೀರೇಶ್ ಸುಮಾರು ಅರ್ಧ ಗಂಟೆ ಬೈಕ್ ಚಲಾಯಿಸಿದ್ದಾನೆ. ಮಳೆಯ ಕಾರಣ ವೀರೇಶ್ ಪ್ಯಾಂಟ್ ತೇವಗೊಂಡಿತ್ತು. ಹೀಗಾಗಿ ಹಾವು ಪ್ಯಾಂಟ್ ನೊಳಗೆ ಹೊಕ್ಕಿರುವ ವಿಚಾರ ವೀರೇಶ್ ಗೆ ತಿಳಿಯಲಿಲ್ಲ. ಮಾರ್ಗ ಮಧ್ಯೆ ಕೆಲ ಅಂಗಡಿಗಳಿಗೆ ತೆರಳಿದ್ದ ವೀರೇಶ್ ಅಂಗಡಿಯವರೊಂದಿಗೆ ಮಾತನಾಡಿದ್ದಾನೆ. ಆಗಲೂ ಅವನಿಗೆ ಪ್ಯಾಂಟ್ ನೊಳಗೆ ಹಾವಿರುವ ವಿಚಾರ ತಿಳಿದೇ ಇಲ್ಲ.

ಯಾವಾಗ ಪ್ಯಾಂಟ್ ನಲ್ಲಿದ್ದ ಹಾವು ನಿಧಾನವಾಗಿ ತೊಡೆಯ ಬಳಿ ಆಗಮಿಸಿತೋ ಆಗ ಎಚ್ಚೆತ್ತ ವೀರೇಶ್ ಕೂಡಲೇ ರಸ್ತೆಪಕ್ಕದಲ್ಲಿ ಬೈಕ್ ನಲ್ಲಿಸಿ ತನ್ನ ಕಾಲನ್ನು ನೋಡಿಕೊಂಡಿದ್ದಾನೆ. ಆಗ ಹಾವಿನ ಬಾಲ ಪ್ಯಾಂಟ್ ನೊಳಗೆ ಅಲ್ಲಾಡುತ್ತಿದ್ದ ದೃಶ್ಯ ನೋಡಿ ಕೂಡಲೇ ರಸ್ತೆ ಬದಿಯ ಸಮೀಪದ ಅಂಗಡಿಯೊಳಗೆ ಹೋಗಿ ಪ್ಯಾಂಟ್ ಬಿಚ್ಚಿದಾಗ ಹಾವನ್ನು ನೋಡಿ ಹೌಹಾರಿದ್ದಾನೆ.

ಸುಮಾರು 2 ಅಡಿ ಉದ್ದದ ಕಂದು ಬಣ್ಣದ ಹಾವು ಆತನ ಪ್ಯಾಂಟ್ ನೊಳಗೆ ಹೊಕ್ಕಿದೆ. ಪ್ಯಾಂಟ್ ಬಿಚ್ಚುತ್ತಿದ್ದಂತೆಯೇ ಕೆಳಗೆ ಬಿದ್ದ ಹಾವು ಅಂಗಡಿಯಿಂದ ಸರಸರನೇ ಹೊರಗೆ ಓಡಿದೆ. ಘಟನೆಯಿಂದ ಆತಂಕಕ್ಕೀಡಾಗಿದ್ದ ವೀರೇಶ್ ನನ್ನು ಕೂಡಲೇ ಗದಗದ ಬಾಬಾ ಸಾಹೇಬ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವೀರೇಶ್ ಸ್ನೇಹಿತ ಶಿವಪ್ಪ ಕಟ್ಟಿ ಹೇಳಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿರುವ ವೀರೇಶ್, ಸಣ್ಣಂದ ಅಗಸಿ ಬಳಿ ಇರುವ ಹೊಟೆಲ್ ಸಮೀಪದಲ್ಲಿ ಬೈಕ್ ಪಾರ್ಕ್ ಮಾಡಿದ್ದೆ. ಅಲ್ಲಿ ಪೊದೆಯಿತ್ತು. ಮಳೆ ಬರುತ್ತಿದ್ದ ಕಾರಣ ನಾನು ಕೂಡ ಕೊಂಚ ನೆಂದಿದ್ದೆ. ಮಳೆ ನಿಂತ ಮೇಲೆ ಬೈಕ್ ಸ್ಟಾರ್ಟ್ ಮಾಡಿಕೊಂಡು ಬಂದೆ. ವಿರಕ್ತಮಠದ ಬಳಿ ಬಂದಾಗ ಪ್ಯಾಂಟ್ ನೊಳಗೆ ಏನೋ ಇದೆ ಅನುಮಾನಗೊಂಡು ನೋಡಿದಾಗ ಹಾವು ಕಾಣಿಸಿತು. ಪ್ಯಾಂಟ್ ತೇವಗೊಂಡಿದ್ದರಿಂದ ನನಗೆ ಅದರ ಸ್ಪರ್ಶ ತಿಳಿಯಲಿಲ್ಲ ಎಂದು ಹೇಳಿದ್ದಾರೆ.

ಒಟ್ಟಾರೆ ಪ್ಯಾಂಟ್ ನೊಳಗೆ ಹೊಕ್ಕ ಹಾವು ಯಾವುದೇ ಅಪಾಯ ಮಾಡದೇ ಇರುವುದು ಅತನ ಅದೃಷ್ಟವೇ ಸರಿ.

Comments are closed.