
ಬೆಂಗಳೂರು: ಅನಾಥ ಶಿಶುವಿಗೆ ಎದೆ ಹಾಲುಣಿಸಿ, ಅದರ ಜೀವ ಉಳಿಸಿದ ಎಲೆಕ್ಟ್ರಾನಿಕ್ ಸಿಟಿ ಠಾಣೆಯ ಮಹಿಳಾ ಕಾನ್‌ಸ್ಟೆಬಲ್ ಅರ್ಚನಾ ಅವರ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.
ಆಗ ತಾನೇ ಜನಿಸಿದ್ದ ಶಿಶುವನ್ನು ಯಾರೋ ದೊಡ್ಡತೊಗೂರಿನ ತೊಟ್ಟಿಯೊಂದರ ಬಳಿ ಎಸೆದು ಹೋಗಿದ್ದರು. ಅದನ್ನು ನೋಡಿದ್ದ ಸ್ಥಳೀಯರೊಬ್ಬರು ಠಾಣೆಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ದಾವಿಸಿದ ಸಬ್ ಇನ್ಸ್ ಪೆಕ್ಟರ್ ನಾಗೇಶ್ ಮಗುವನ್ನು ರಕ್ಷಿಸಿ, ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ಚಿಕಿತ್ಸೆ ಬಳಿಕ ಮಗುವನ್ನು ಪೊಲೀಸ್ ಠಾಣೆಗೆ ಕರೆದು ತಂದಿದ್ದಾರೆ.
ಈ ವೇಳೆ ಮಗು ಹಸಿವಿನಿಂದ ಅಳುತ್ತಿತ್ತು. ಇದನ್ನು ನೋಡಿದ ಮಹಿಳಾ ಕಾನ್ ಸ್ಟೇಬಲ್ ಅರ್ಚನಾ ಮಗುವಿಗೆ ಎದೆ ಹಾಲುಣಿಸಿ ಅದರ ಹಸಿವು ನೀಗಿಸಿದ್ದಾರೆ.
ಅರ್ಚನಾ ಅವರಿಗೂ ಇತ್ತೀಚೆಗಷ್ಟೇ ಗಂಡು ಮಗುವಾಗಿದೆ. ಹೆರಿಗೆ ರಜೆ ಮುಗಿಸಿದ್ದ ಅವರು, ವಾರದ ಹಿಂದಷ್ಟೇ ಕೆಲಸಕ್ಕೆ ಪುನಃ ಹಾಜರಾಗಿದ್ದರು. ಶನಿವಾರ ಶಿಶು ಕಂಡು ಮರುಕಪಟ್ಟಿದ್ದ ಅವರು ಹಾಲು ಕುಡಿಸಿ ಮಾನವೀಯತೆ ಮೆರೆದಿದ್ದಾರೆ. ಅರ್ಚನಾ ಅವರ ಈ ಕೆಲಸಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.
ಮಗು ಆರೋಗ್ಯವಾಗಿದ್ದು ನಾಗೇಶ್ ಆ ಮಗುವಿಗೆ ಕುಮಾರ ಸ್ವಾಮಿ ಎಂದು ನಾಮಕರಣ ಮಾಡಿದ್ದಾರೆ. ನವ ಜಾತ ಶಿಶುವನ್ನು ಸದ್ಯ ವಿಲ್ಸನ್ ಗಾರ್ಡನ್ ಬಳಿಯ ಶಿಶುಗೃಹದ ಸುಪರ್ದಿಗೆ ನೀಡಲಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ.
Comments are closed.