ಕರ್ನಾಟಕ

ಬೆಂಗಳೂರಿನಲ್ಲಿ ಯುವತಿಗೆ ಲೈಂಗಿಕ ದೌರ್ಜನ್ಯ ಎಸಗಿ, ಕೃತ್ಯದ ಚಿತ್ರಗಳನ್ನು ಕ್ಲಿಕ್ಕಿಸಿಕೊಂಡು ಬೆದರಿಸುತ್ತಿದ್ದ ಓಲಾ ಕ್ಯಾಬ್‌ ಚಾಲಕ ಬಂಧನ

Pinterest LinkedIn Tumblr

ಬೆಂಗಳೂರು: ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಕೃತ್ಯದ ಚಿತ್ರಗಳನ್ನು ಕ್ಲಿಕ್ಕಿಸಿಕೊಂಡು ಬೆದರಿಸುತ್ತಿದ್ದ ಆರೋಪದಡಿ ಓಲಾ ಕ್ಯಾಬ್‌ ಚಾಲಕ ವಿ.ಅರುಣ್ (28) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಜೂನ್ 1ರಂದು ನಡೆದ ಘಟನೆ ಬಗ್ಗೆ ಇ– ಮೇಲ್ ಮೂಲಕ ಸಂತ್ರಸ್ತೆಯು ನಗರ ಪೊಲೀಸ್‌ ಕಮಿಷನರ್ ಟಿ.ಸುನೀಲ್‌ಕುಮಾರ್‌ ಅವರಿಗೆ ದೂರು ಕಳುಹಿಸಿದ್ದರು. ಅದನ್ನು ಆಧರಿಸಿ ಆರೋಪಿಯನ್ನು ಬಂಧಿಸಿದ್ದೇವೆ. ಆತನ ಕಾರು ಸಹ ಜಪ್ತಿ ಮಾಡಿದ್ದೇವೆ ಎಂದು ಜೀವನ್‌ಬಿಮಾ ನಗರ ಪೊಲೀಸರು ತಿಳಿಸಿದರು.

ವಾಸ್ತುಶಿಲ್ಪಿಯಾಗಿರುವ ಯುವತಿಯು ಕೆಲಸ ನಿಮಿತ್ತ ಜೂನ್ 1ರಂದು ಮುಂಬೈಗೆ ಹೊರಡಲು ಸಿದ್ಧರಾಗಿದ್ದರು. ಮನೆಯಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಲೆಂದು ರಾತ್ರಿ 11 ಗಂಟೆಗೆ ಓಲಾ ಕ್ಯಾಬ್ ಕಾಯ್ದಿರಿಸಿದ್ದರು. ಕ್ಯಾಬ್‌ ಸಮೇತ ಸ್ಥಳಕ್ಕೆ ಹೋಗಿದ್ದ ಅರುಣ್, ಅವರನ್ನು ಹತ್ತಿಸಿಕೊಂಡು ಅಲ್ಲಿಂದ ಹೊರಟಿದ್ದ.

ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಹೋಗಬೇಕಿದ್ದ ಕ್ಯಾಬ್‌, ಬೇರೆ ಮಾರ್ಗದಲ್ಲಿ ಹೊರಟಿತ್ತು. ಅದನ್ನು ಯುವತಿ ಪ್ರಶ್ನಿಸಿದ್ದರು. ಆರೋಪಿ, ‘ಮುಖ್ಯರಸ್ತೆಯಿಂದ ಹೋದರೆ ದೂರವಾಗುತ್ತದೆ. ಜತೆಗೆ, ಅಲ್ಲಿ ಟೋಲ್ ಕಟ್ಟಬೇಕು. ಹೀಗಾಗಿ ಈ ರಸ್ತೆಯಲ್ಲಿ ಹೊರಟಿದ್ದೇನೆ’ ಎಂದಿದ್ದ.

ನಿಲ್ದಾಣ ಹತ್ತಿರವಿರುವಾಗಲೇ ರಸ್ತೆ ಪಕ್ಕದಲ್ಲಿ ಕಾರು ನಿಲ್ಲಿಸಿದ್ದ ಆರೋಪಿ, ಯುವತಿಯ ಕೈ ಹಿಡಿದು ಎಳೆದಾಡಿದ್ದ. ಕಾರಿನಿಂದ ಹೊರಗೆ ಹೋಗಲು ಯುವತಿ ಪ್ರಯತ್ನಿಸಿದಾಗ, ಬಾಗಿಲುಗಳನ್ನು ಲಾಕ್‌ ಮಾಡಿದ್ದ. ನಂತರ, ‘ನಿನ್ನ ಬೆತ್ತಲೆ ಫೋಟೊಗಳನ್ನು ತೆಗೆಯಬೇಕು. ಬಟ್ಟೆ ಬಿಚ್ಚು’ ಎಂದು ಒತ್ತಾಯಿಸಿದ್ದ. ಅದಕ್ಕೆ ಯುವತಿ ಒಪ್ಪದಿದ್ದಾಗ, ಮೈ – ಕೈ ಮುಟ್ಟಿದ್ದ. ಅದೇ ವೇಳೆ ಯುವತಿಯ ಫೋಟೊಗಳನ್ನು ಮೊಬೈಲ್‌ನಲ್ಲಿ ಕ್ಲಿಕ್ಕಿಸಿಕೊಂಡಿದ್ದ. ಕುತ್ತಿಗೆ ಹಿಸುಕಿ ಕೊಲೆ ಮಾಡಲು ಸಹ ಯತ್ನಿಸಿದ್ದ.

ನಂತರ, ಯುವತಿಯನ್ನು ನಿಲ್ದಾಣಕ್ಕೆ ಕರೆದೊಯ್ದು ಬಿಟ್ಟಿದ್ದ. ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಸಿದ್ದ. ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವುದಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದ. ಹೆದರಿದ ಯುವತಿ, ನಿಗದಿಯಂತೆ ವಿಮಾನ ಏರಿ ಮುಂಬೈಗೆ ಹೋಗಿದ್ದರು. ಸ್ನೇಹಿತರಿಗೆ ವಿಷಯ ತಿಳಿಸಿ, ಅವರ ಸಲಹೆಯಂತೆ ದೂರು ನೀಡಿದ್ದರು ಎಂದು ಪೊಲೀಸರು ಹೇಳಿದರು.

Comments are closed.