ಕರ್ನಾಟಕ

ನಾನು ಕೊನೆ ಬೆಂಚಿನ ವಿದ್ಯಾರ್ಥಿ: ಕುಮಾರಸ್ವಾಮಿ

Pinterest LinkedIn Tumblr


ಬೆಂಗಳೂರು: ಕಾಲೇಜು ದಿನಗಳು ಹುಡುಗಾಟದ ದಿನಗಳು. ಆ ದಿನಗಳು ಮತ್ತೊಮ್ಮೆ ನಮಗೆ ಸಿಗುವುದಿಲ್ಲ. ನಾನು ವಿದ್ಯಾರ್ಥಿಯಾಗಿದ್ದಾಗ ಶಿಕ್ಷಕರು ಪ್ರಶ್ನೆ ಕೇಳುತ್ತಾರೆ ಎಂದು ಲಾಸ್ಟ್​ ಬೆಂಚ್​ನಲ್ಲಿ ಕೂರುತ್ತಿದ್ದೆ ಎಂದು ಮುಖ್ಯಮಂತ್ರಿ ಎಚ್.​ಡಿ ಕುಮಾರಸ್ವಾಮಿ ತಮ್ಮ ವಿದ್ಯಾರ್ಥಿ ಜೀವನವನ್ನು ಸ್ಮರಿಸಿದ್ದಾರೆ.

ಜಯನಗರ ನ್ಯಾಷನಲ್​ ಕಾಲೇಜಿನ ಹಳೆ ವಿದ್ಯಾರ್ಥಿಯಾದ ಎಚ್​ಡಿಕೆಯನ್ನು ಮುಖ್ಯಮಂತ್ರಿಯಾದ ನಂತರ ಪ್ರಥಮ ಬಾರಿಗೆ ಕಾಲೇಜು ಆಡಳಿತ ಮಂಡಳಿ ಆಹ್ವಾನಿಸಿತ್ತು. ಕಾಲೇಜಿಗೆ ತೆರಳಿದ ಸಿಎಂ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಬಳಿ ತಮ್ಮ ಕಾಲೇಜಿನ ದಿನಗಳ ಬಗ್ಗೆ ನೆನೆದು, ಕೆಲ ಸಲಹೆ ನೀಡಿದರು.

ನಮ್ಮ ತಂದೆ ನನಗೆ ಯಾವಾಗಲೂ ನೀನು ಉದ್ಧಾರ ಆಗುವುದಿಲ್ಲ ಎನ್ನುತ್ತಿದ್ದರು. ಆದರೆ, ನಾನು ಗುರಿ ಇಟ್ಟುಕೊಂಡು ಪ್ರಯತ್ನ ಮಾಡಿದ್ದೇನೆ. ಹಾಗೆಯೇ ನೀವೂ ನಿಮ್ಮ ಗುರಿಯೆಡೆಗೆ ನಡೆದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ನಾನು ಆಗ ದಡ್ಡ ವಿದ್ಯಾರ್ಥಿಯಾಗಿದ್ದೆ
ನಾನು ಆಗ ಅತ್ಯಂತ ದಡ್ಡ ವಿದ್ಯಾರ್ಥಿ ಆಗಿದ್ದೆ. ರಾಜಕುಮಾರ್ ಸಿನಿಮಾ ನೋಡುತ್ತ ಸಿನಿಮಾ ಕ್ಷೇತ್ರಕ್ಕೆ ಹೋಗಿದ್ದೆ. ಅವತ್ತು ನಾನು ಚೆನ್ನಾಗಿ ಓದಿದ್ದರೆ ಇಂದು ನಾನು ಐಎಎಸ್ ಅಧಿಕಾರಿ ಆಗುತ್ತಿದ್ದೆ ಎನಿಸುತ್ತದೆ. ಆಗ ಓದದೇ ಇದ್ದದ್ದೇ ನನಗೆ ಈಗ ಒಳ್ಳೆಯದಾಗಿದೆ. ಆದರೆ, ಈಗ ಎಷ್ಟು ಓದಿದರೂ ಸಾಲದು, ವಿಷಯ ತಿಳಿದುಕೊಳ್ಳಲು ರಾತ್ರಿ 2 ಗಂಟೆ ಆದರೂ ಓದುತ್ತಿರುತ್ತೇನೆ ಎಂದರು.

ನರಸಿಂಹಯ್ಯನವರು ದಾರಿ ದೀಪ
ನ್ಯಾಷನಲ್ ಕಾಲೇಜು ಶಿಕ್ಷಣ ಸಂಸ್ಥೆಯನ್ನು ಬೆಳೆಸಲು ಎಚ್​. ನರಸಿಂಹಯ್ಯ ಅವರ ಕೊಡುಗೆ ಅಪಾರ. ನರಸಿಂಹಯ್ಯನವರ ಸರಳ ಜೀವನ ಎಲ್ಲರಿಗೂ ದಾರಿ ದೀಪ ಎಂದರು.

ರೈತರಿಗೆ ಕೊಟ್ಟ ಮಾತಿನಿಂದ ಹಿಂದೆ ಸರಿಯುವುದಿಲ್ಲ
ರೈತರ ಸಾಲಮನ್ನಾ ಮಾಡಿ ಎಂದು ಬಂದ್ ಮಾಡುತ್ತಾರೆ. ನನಗೆ ಉಸಿರಾಡಲೂ ಸಮಯ ನೀಡುತ್ತಿಲ್ಲ. ನನಗೆ ಕಾಂಗ್ರೆಸ್​ ನಾಯಕರ ಸಹಕಾರವೂ ಬೇಕು. ನಾನು ಕಾಂಗ್ರೆಸ್ ಬೆಂಬಲ ಪಡೆದು ಸಿಎಂ ಆಗಿದ್ದೇನೆ. ಆದರೆ, ರೈತರಿಗೆ ಕೊಟ್ಟ ಮಾತಿನಿಂದ ಹಿಂದೆ ಸರಿಯುವುದಿಲ್ಲ. ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡು ಸಾಲಮನ್ನಾ ಮಾಡುತ್ತೇನೆ ಎಂದರು.

ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಆಗಬೇಕಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣವನ್ನು ವ್ಯಾಪಾರ ಮಾಡಿಕೊಂಡಿದ್ದಾರೆ. ಡೊನೇಷನ್ ತೆಗೆದುಕೊಳ್ಳದಂತೆ ಕಾನೂನು ತರಲಾಗಿಲ್ಲ. ಬಡವರಿಗೆ ಶಿಕ್ಷಣ ಸಿಗದಂತಾಗಿದೆ. ಸರ್ಕಾರ ಬಡವರಿಗೆ ಉತ್ತಮ ಶಿಕ್ಷಣ ವ್ಯವಸ್ಥೆ ಜಾರಿಗೊಳಿಸಬೇಕಿದೆ ಎಂದರು.

Comments are closed.