ಕರ್ನಾಟಕ

ಕುವೈತ್‌ನಲ್ಲಿ ಮಾಲೀಕ ಸಂಬಳ ನೀಡದೆ ಕಿರುಕುಳ: ಬೇರೊಬ್ಬರ ಪಾಸ್‌ಪೋರ್ಟ್‌ನಲ್ಲಿ ದೇಶಕ್ಕೆ ಬಂದು ಬಂಧನ

Pinterest LinkedIn Tumblr


ಬೆಂಗಳೂರು: ದುಡಿಯಲೆಂದು ರಾಷ್ಟ್ರ ಕುವೈತ್‌ಗೆ ತೆರಳಿದ್ದ ಕೇರಳ ಮೂಲದ ವ್ಯಕ್ತಿಯೊಬ್ಬರು, ಮಾಲೀಕ ಸಂಬಳ ನೀಡದೆ ಕಿರುಕುಳ ನೀಡುತ್ತಿರುವುದರಿಂದ ಬೇಸರಗೊಂಡು ಮತ್ತೊಬ್ಬರ ಪಾಸ್‌ಪೋರ್ಟ್‌ನಲ್ಲಿ ಭಾರತಕ್ಕೆ ಮರಳಿ ವಲಸೆ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ.

ಕೇರಳದ ಇಡುಕ್ಕಿ ಜಿಲ್ಲೆಯ ಸನ್ನಿ ಮ್ಯಾಥ್ಯು (55) ಎಂಬವರನ್ನು ವಲಸೆ ವಿಭಾಗದ ಅಧಿಕಾರಿಗಳು ವಶಕ್ಕೆ ಪಡೆದು ವಿಮಾನ ನಿಲ್ದಾಣದ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಮೇ 29ರಂದು ಬೆಳಗ್ಗೆ 4.20ಕ್ಕೆ ಕುವೈತ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಬಂದ ಮುರುಳಿಧರನ್‌ ಕರುವಂಗೊಡೆ ಎಂಬ ವ್ಯಕ್ತಿಯನ್ನು ವಲಸೆ ವಿಭಾಗದಲ್ಲಿ ಅಧಿಕಾರಿಗಳು ಪಾಸ್‌ಪೋರ್ಟ್‌ ಹಾಗೂ ಇನ್ನಿತರ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಪಾಸ್‌ಪೋರ್ಟ್‌ನಲ್ಲಿರುವ ಫೋಟೋ ಹಾಗೂ ವ್ಯಕ್ತಿಯ ಮುಖಕ್ಕೂ ವ್ಯತ್ಯಾಸ ಕಂಡು ಬಂದಿದೆ.
ವಿಚಾರಣೆ ನಡೆಸಿದಾಗ ‘‘ನಾನು ಸನ್ನಿ ಮ್ಯಾಥ್ಯುಆಗಿದ್ದು 2002ರಲ್ಲಿ ಅಸಲಿ ಪಾಸ್‌ಪೋರ್ಟ್‌ ಬಳಸಿ ಕೊಚ್ಚಿಯಿಂದ ಕುವೈತ್‌ಗೆ ತೆರಳಿ ಚಾಲಕನಾಗಿ ಕೆಲಸ ಮಾಡುತ್ತಿದ್ದೆ. ಪಾಸ್‌ಪೋರ್ಟ್‌ ಅವಧಿ ಮುಗಿದ ಕಾರಣ ಅಲ್ಲಿನ ಭಾರತೀಯ ಧೂಸವಾಸ ಕಚೇರಿಗೆ ತೆರಳಿ ನವೀಕರಿಸಿಕೊಂಡಿದ್ದೆ. ಬಳಿಕ 2017ರ ಜೂ.31ರಂದು ಕುವೈತ್‌ನಿಂದ ಕೊಚ್ಚಿಗೆ ಮರಳಿದ್ದೆ. ಜು.31ರಂದು ಮತ್ತೆ ಕೊಚ್ಚಿಯಿಂದ ಕುವೈತ್‌ಗೆ ತೆರಳಿ ಮೊಹಮ್ಮದ್‌ ಅಲ್‌ ಯಾಸಿಮ್‌ ಎಂಬುವರ ಬಳಿ ಕೆಲಸ ಮಾಡುತ್ತಿದ್ದೆ. ಆದರೆ, ಸಂಬಳ ಕೊಡದೆ ಅವರು ತೊಂದರೆ ಕೊಡುತ್ತಿದ್ದ ಕಾರಣ ಬೇಸರಗೊಂಡು ಅಲ್ಲಿನ ಒಬ್ಬ ಕೆಲಸಗಾರನ ಸಹಾಯದಿಂದ ಮುರುಳಿಧರನ್‌ ಕರುವೆಂಗೊಡೆ ಹೆಸರು ಮಾಹಿತಿ ಇರುವ ಪಾಸ್‌ಪೋರ್ಟ್‌ ಪಡೆದು ಭಾರತಕ್ಕೆ ಪ್ರಯಾಣ ಮಾಡಿದ್ದೇನೆ’’ ಎಂದು ಸನ್ನಿ ಮ್ಯಾಥ್ಯು ಒಪ್ಪಿಕೊಂಡಿದ್ದಾನೆ.

ವಲಸೆ ಅಧಿಕಾರಿಗಳು ನೀಡಿದ ದೂರು ಆಧರಿಸಿ ಕೆಐಎ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.