ಕರ್ನಾಟಕ

ಸಾಲಮನ್ನಾಕ್ಕೆ ಷರತ್ತು ವಿಧಿಸಿ ಎಂದ ಆರ್ಥಿಕ ಇಲಾಖೆ!

Pinterest LinkedIn Tumblr


ಬೆಂಗಳೂರು: ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಸಂಪೂರ್ಣ ಸಾಲ ಮನ್ನಾ ಮಾಡಲು ಆಸಕ್ತಿ ತೋರಿಸಿದರೆ ರಾಜ್ಯದ ಆರ್ಥಿಕ ಇಲಾಖೆ ಈ ಆಸೆಗೆ ಕೊಕ್ಕೆ ಹಾಕಿದೆ.

ಹೌದು, ರೈತರ ಸಂಪೂರ್ಣ ಸಾಲಮನ್ನಾ ಮಾಡಿದರೆ ಆರ್ಥಿಕ ಸಂಕಷ್ಟ ಎದುರಾಗುತ್ತದೆ ಎಂದು ಹಣಕಾಸು ಇಲಾಖೆಯ ಅಧಿಕಾರಿಗಳು ಸಿಎಂ ಎಚ್‍ಡಿ ಕುಮಾರಸ್ವಾಮಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಾಲಮನ್ನಾ ಮಾಡುವ ಸಂಬಂಧ ಆರ್ಥಿಕ ಇಲಾಖೆಯ ಜೊತೆ ಮುಖ್ಯಮಂತ್ರಿಗಳು ಸಭೆ ನಡೆಸಿದ್ದಾರೆ. ಈ ವೇಳೆ 54 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಲು ಸಾಧ್ಯವಿಲ್ಲ. ಸಾಲಮನ್ನಾಗೆ ಷರತ್ತುಗಳನ್ನು ಹಾಕಬೇಕು, ಸಂಪೂರ್ಣ ಸಾಲಮನ್ನಾ ಮಾಡಲು ಹೋದರೆ ಸರ್ಕಾರ ನಡೆಸುವುದು ಕಷ್ಟ. ಕಳೆದ ಸರ್ಕಾರದ ವೇಳೆಯೂ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ ಎಂದು ತಿಳಿಸಿರುವ ಅಧಿಕಾರಿಗಳು ಈಗಲೂ ವಿತ್ತೀಯ ಶಿಸ್ತಿದೆ. ಆದರೆ ಸದ್ಯದ ಆರ್ಥಿಕ ಸ್ಥಿತಿಯೊಳಗೆ 54 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

ಹಣಕಾಸು ಅಧಿಕಾರಿಗಳ ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿರುವ ಎಚ್‍ಡಿಕೆ ಸಾಲಮನ್ನಾಕ್ಕೆ ಹಲವು ಷರತ್ತುಗಳನ್ನು ವಿಧಿಸುವ ಸಾಧ್ಯತೆಗಳಿದೆ. ಸಂಪೂರ್ಣ ಸಾಲ ಮನ್ನಾದ ವ್ಯಾಪ್ತಿಯನ್ನು 1 ಲಕ್ಷ ರೂ.ಗೆ ಮಿತಿಗೊಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ರಾಜ್ಯ ಸರ್ಕಾರದ ಸಾಲಮನ್ನಾ ವಿಷಯವನ್ನು ಪ್ರಮುಖ ಅಸ್ತ್ರವನ್ನಾಗಿ ಪ್ರಯೋಗಿಸುತ್ತಿರುವ ಬಿಜೆಪಿಗೆ ಟಾಂಗ್ ನೀಡಲು ಇಂದು ಸಂಜೆ ಅಥವಾ ನಾಳೆಯೊಳಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.

ಗರಿಷ್ಟ 1 ಲಕ್ಷ ಯಾಕೆ?
ಬಿಎಸ್ ಯಡಿಯೂರಪ್ಪನವರು ಪ್ರಮಾಣವಚನ ಸ್ವೀಕರಿಸಿದ ಬಳಿಕ 1 ಲಕ್ಷ ರೂ.ವರೆಗಿನ ರೈತರ ಸಹಕಾರಿ ಮತ್ತು ರಾಷ್ಟ್ರಿಕೃತ ಬ್ಯಾಂಕ್ ಗಳ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ತಿಳಿಸಿದ್ದರು. ಹೀಗಾಗಿ ಒಂದು ಲಕ್ಷ ಮಿತಿ ಹಾಕಿದರೆ ಬಿಜೆಪಿಯ ಟೀಕೆಯಿಂದಲೂ ಪಾರಾಗಬಹುದು ಎನ್ನುವ ನಿರ್ಧಾರಕ್ಕೆ ಸರ್ಕಾರ ಬಂದಿದೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಈ ಹಿಂದೆ ಮಹಾರಾಷ್ಟ್ರ, ಉತ್ತರ ಪ್ರದೇಶ, ಪಂಜಾಬ್ ಸರ್ಕಾರಗಳು ಒಂದು ಲಕ್ಷ ರೂ. ಸಾಲವನ್ನು ಮನ್ನಾ ಮಾಡಿತ್ತು. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ 50 ಸಾವಿರ ರೂ. ಸಹಕಾರಿ ಸಂಘದಿಂದ ಪಡೆದ ಸಾಲವನ್ನು ಮನ್ನಾ ಮಾಡಿದ್ದರು. ನಾವು 50 ಸಾವಿರ ರೂ. ಮನ್ನಾ ಮಾಡಿದ್ದೇವೆ. ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್ ಗಳ ರೈತರ ಸಾಲವನ್ನು ಮಾಡಲಿ ಎಂದು ಅಂದು ಪ್ರತಿಕ್ರಿಯಿಸಿದ್ದರು.

Comments are closed.