ಕರ್ನಾಟಕ

ರಾಜ್ಯದ ರೈತರ ಸಾಲ ಮನ್ನಾ ಮಾಡದಿದ್ದರೆ ದೊಡ್ಡಮಟ್ಟದ ಹೋರಾಟ: ಕೋಡಿಹಳ್ಳಿ ಚಂದ್ರಶೇಖರ್‌

Pinterest LinkedIn Tumblr


ಕುಂದಾಣ: ಜೆಡಿಎಸ್‌ನಿಂದ ಮುಖ್ಯಮಂತ್ರಿ ಸ್ಥಾನ, ಕಾಂಗ್ರೆಸ್‌ನಿಂದ ಉಪಮುಖ್ಯಮಂತ್ರಿ ಸ್ಥಾನ ಎಂದು ಹೇಗೆ ಹಂಚಿಕೆ ಮಾಡಿಕೊಂಡಿದೆಯೋ ಹಾಗೆ ರಾಜ್ಯ ರೈತರ ಸಾಲ ಮನ್ನಾ ಮಾಡಬೇಕು. ಇಲ್ಲದಿದ್ದರೆ ದೊಡ್ಡ ಮಟ್ಟದಲ್ಲಿ ರಾಜ್ಯಾದ್ಯಂತ ರೈತ ಚಳವಳಿಯ ಮೂಲಕ ಸರಕಾರಕ್ಕೆ ಬಿಸಿ ಮುಟ್ಟಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಹೇಳಿದರು.

ಕುಂದಾಣ ಹೋಬಳಿಯ ಸೀಕಾಯನಹಳ್ಳಿ ಗ್ರಾಮದಲ್ಲಿ ತಾಲೂಕು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಹಮ್ಮಿಕೊಂಡಿದ್ದ ನೂತನ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಶಾಖಾ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

ಹೊಸ ಸರಕಾರ ಸಾಲಮನ್ನಾ ಮಾಡುವುದೇ ಎಂದು ರಾಜ್ಯದ ಹಾವೇರಿ, ದಾವಣಗೆರೆ ಮುಂತಾದ ಭಾಗದ ರೈತರು ನನಗೆ ಕರೆ ಮಾಡಿ ಕೇಳುತ್ತಿದ್ದಾರೆ. 53 ಸಾವಿರ ಕೋಟಿ ರೂ.ಗಳ ರೈತರ ಸಾಲ ಮನ್ನಾ ಅಧಿಕಾರ ಸ್ವೀಕರಿಸಿದ 24 ಗಂಟೆಗಳಲ್ಲಿ ಮಾಡುತ್ತೇನೆಂದು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಕೊಟ್ಟ ಮಾತು ಉಳಿಸಿಕೊಳ್ಳಬೇಕು ಎಂದರು.

ಸಾಲ ಮನ್ನಾ ಆಗುತ್ತದೆ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ಸಮ್ಮಿಶ್ರ ಸರಕಾರದಲ್ಲಿ ನಾವು ಅವರನ್ನು ಕೇಳಿಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡಲು ಪ್ರಯತ್ನಿಸುತ್ತೇನೆ ಎನ್ನುತ್ತಾರೆ. ಆದರೆ ರೈತರ ಸಾಲದ ವಿಚಾರದಲ್ಲಿ ಸ್ಪಷ್ಟವಾಗಿ ಮುಖ್ಯಮಂತ್ರಿಯವರು ಹೇಳುವಂತಿರಬೇಕು ಎಂದರು.

70 ವರ್ಷಗಳಲ್ಲಿ ರೈತ ಸಮುದಾಯದ ಪರವಾಗಿ, ಹಳ್ಳಿಗಳ ಪರವಾಗಿ ಯಾವೊಬ್ಬ ಆರ್ಥಿಕ ತಜ್ಞನೂ ಏಕೆ ಮಾತನಾಡಿಲ್ಲ? ಶಾಸಕರೆಲ್ಲರೂ ರೆಸಾರ್ಟ್‌ನಲ್ಲಾದರೂ ಇರಲಿ ಬೇರೆಡೆಯಲ್ಲಾದರೂ ಇರಲಿ ಕೂಡಲೇ ರಾಜ್ಯದಲ್ಲಿರುವ ರೈತರ ಸಾಲವನ್ನು ರದ್ದು ಮಾಡಬೇಕು ಅಷ್ಟೇ! ಇದು ಮುಖ್ಯಮಂತ್ರಿಗಳಿಗೆ ತಲುಪಿಸುವ ಪೂರ್ಣ ಜವಾಬ್ದಾರಿ ಪ್ರತಿ ಶಾಸಕರಿಗೆ ಇದೆ ಎಂದರು.

Comments are closed.