ಅಂತರಾಷ್ಟ್ರೀಯ

ಐರ್ಲೆಂಡ್‌ ನಲ್ಲಿ ಗರ್ಭಪಾತ ನಿಷೇಧ ಕಾನೂನಿಗೆ ಕನ್ನಡತಿ ಸಾವು ಪ್ರಕರಣ: ಡಾ| ಸವಿತಾ ಹಾಲಪ್ಪನವರ್‌ ಗೆ ನ್ಯಾಯ ದೊರಕಿಸಿದ ಐರಿಶ್‌ ಜನತೆ

Pinterest LinkedIn Tumblr


ಡಬ್ಲಿನ್‌/ಬೆಳಗಾವಿ: ಕೊನೆಗೂ ಕಠಿನ ಹಾಗೂ ಮಾನವ ವಿರೋಧಿ ಗರ್ಭಪಾತ ಕಾನೂನಿನ ವಿರುದ್ಧ ಐರ್ಲೆಂಡ್‌ ಧ್ವನಿಯೆತ್ತಿದೆ. ಅಮಾನುಷ ಕಾನೂನಿಗೆ ಬಲಿಯಾಗಿದ್ದ ಕನ್ನಡತಿಗೆ ನ್ಯಾಯ ಸಿಕ್ಕಿದೆ. ಐರಿಶ್‌ ಸಂವಿಧಾನಕ್ಕೆ ತಂದಿದ್ದ 8ನೇ ತಿದ್ದುಪಡಿಯನ್ನು ರದ್ದು ಮಾಡಲು ಐರ್ಲೆಂಡ್‌ ಜನತೆ “ಎಸ್‌’ ಎನ್ನುವ ಮೂಲಕ ಶನಿವಾರ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ಇಲ್ಲಿನ ಕಠಿನ ಗರ್ಭಪಾತ ಕಾನೂನನ್ನು ರದ್ದು ಮಾಡಬೇಕೇ, ಬೇಡವೇ ಎಂಬ ನಿಟ್ಟಿನಲ್ಲಿ ನಡೆದ ಜನಾಭಿಪ್ರಾಯದಲ್ಲಿ ಶೇ. 60.19 ಮಂದಿ ರದ್ದು ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ನಡೆದ ಜನಮತ ಸಂಗ್ರಹದ ಫ‌ಲಿತಾಂಶ ಶನಿವಾರ ಪ್ರಕಟವಾಗಿದೆ. ಖುದ್ದು ಭಾರತೀಯ ಮೂಲದ ಲಿಯೋ ವರಾಡ್ಕರ್‌ ಅವರೇ “ಎಸ್‌’ ಜನಮತಕ್ಕೆ ಗೆಲುವು ಸಿಕ್ಕಿದೆ ಎಂದು ಘೋಷಿಸಿದ್ದಾರೆ. ಈ ವರ್ಷಾಂತ್ಯಕ್ಕೆ ಹೊಸ ತಿದ್ದುಪಡಿ ಕಾನೂನು ತರುವುದಾಗಿ ಅವರು ಹೇಳಿದ್ದಾರೆ.

ಐರ್ಲೆಂಡ್‌ನ‌ಲ್ಲಿ ಕನ್ನಡತಿ ಡಾ| ಸವಿತಾ ಹಾಲಪ್ಪನವರ್‌ ಗರ್ಭಪಾತಕ್ಕೆ ಅವಕಾಶ ಸಿಗದೇ ಸಾವನ್ನಪ್ಪಿದ ಪ್ರಕರಣವು ವಿಶ್ವಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಐರ್ಲೆಂಡ್‌ನ‌ ಜನತೆ ಗರ್ಭಪಾತ ಕಾನೂನಿನ ವಿರುದ್ಧ ನಡೆಸಿದ ನಿರಂತರ ಹೋರಾಟಕ್ಕೆ ಈಗ ಜಯ ಸಿಕ್ಕಿದೆ. ಜತೆಗೆ ಸವಿತಾರ ಕುಟುಂಬಕ್ಕೂ ನ್ಯಾಯ ಒದಗಿಸಿದಂತಾಗಿದೆ. ಸಂವಿಧಾನಕ್ಕೆ 35 ವರ್ಷಗಳ ಹಿಂದೆ ತಂದಿದ್ದ ತಿದ್ದುಪಡಿಯಲ್ಲಿ ಬದಲಾವಣೆಯಾಗಬೇಕೆಂದು ಶೇ. 60.19 ಮಂದಿ ಅಭಿಪ್ರಾಯಪಟ್ಟಿದ್ದಾರೆ. ಒಟ್ಟು 40 ಕ್ಷೇತ್ರಗಳ ಪೈಕಿ 37ರ ಮತ ಎಣಿಕೆ ಮುಕ್ತಾಯವಾಗಿದೆ.

ವಿಮಾನದಲ್ಲಿ ಬಂದು ಮತ ಹಾಕಿದರು:
ಸವಿತಾ ಹಾಲಪ್ಪನವರ್‌ಗೆ ಐರ್ಲೆಂಡ್‌ನ‌ಲ್ಲಿ ಅನ್ಯಾಯವಾಗಿದೆ. ಅದನ್ನು ಸರಿಪಡಿಸಬೇಕು ಎನ್ನುವ ನಿಟ್ಟಿನಲ್ಲಿ ಯುನೈಟೆಡ್‌ ಕಿಂಗ್‌ಡಮ್‌, ಐರೋಪ್ಯ ಒಕ್ಕೂಟದಲ್ಲಿರುವ ಐರ್ಲೆಂಡ್‌ ನಾಗರಿಕರು ಕೂಡ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಮತ ಹಾಕಲು ವಿಮಾನದಲ್ಲಿ ಡಬ್ಲಿನ್‌ ಮತ್ತು ಇತರ ನಗರಗಳಿಗೆ ಪ್ರಯಾಣ ಮಾಡಿದ್ದಾರೆ. ಬಿಬಿಸಿ ಜತೆಗೆ ಮಾತನಾಡಿದ ಡಬ್ಲಿನ್‌ ಮೂಲದ ಮಹಿಳೆ ಕ್ಲಾರಾ ಕಿಯೋಕೋ “ನಾನು ಉದ್ಯೋಗ ನಿಮಿತ್ತ ಜಪಾನ್‌ನಲ್ಲಿ ನೆಲೆಸಿದ್ದೇನೆ. ಈ ಕ್ರೂರ ಕಾನೂನು ಬದಲಾವಣೆಯಾಗಬೇಕೆಂದು ಟೋಕಿಯೋದಿಂದ ಐರ್ಲೆಂಡ್‌ಗೆ 26 ಗಂಟೆಗಳ ಪ್ರಯಾಣ ಮಾಡಿ ಮತ ಹಾಕಿದ್ದೇನೆ’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಏನಾಗಿತ್ತು?: ಆರು ವರ್ಷಗಳ ಹಿಂದೆ ಬೆಳಗಾವಿ ಮೂಲದ ಡಾ| ಸವಿತಾ ಹಾಲಪ್ಪನವರ್‌ ಗಾಲ್ವೆಯ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅವರಿಗೆ ಗರ್ಭಪಾತ ಮಾಡದೇ ಇದ್ದರೆ ಸವಿತಾ ಜೀವಕ್ಕೇ ಅಪಾಯವಿದೆ ಎಂದು ವೈದ್ಯಕೀಯ ವರದಿ ತಿಳಿಸಿತ್ತು. ಹೀಗಾಗಿ ಗರ್ಭಪಾತ ಮಾಡುವಂತೆ ಕುಟುಂಬ ಸದಸ್ಯರು ಆಸ್ಪತ್ರೆಗೆ ಮನವಿ ಮಾಡಿದರೂ ಕಾನೂನಿನಲ್ಲಿ ಅವಕಾಶ ಇಲ್ಲದೇ ಇದ್ದುದರಿಂದ ಆ ರೀತಿ ನಡೆಯಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದರು.

ಸವಿತಾ ಜೀವಕ್ಕೆ ಅಪಾಯವಿದೆ, ಗರ್ಭಪಾತ ಮಾಡಿ ಎಂದು ಎಷ್ಟು ಗೋಗರೆದರೂ ವೈದ್ಯರು ಕಾನೂನಿನ ನೆಪ ಹೇಳಿ ಗರ್ಭಪಾತ ಮಾಡಲಿಲ್ಲ. ಅಂತಿಮವಾಗಿ 2012ರ ನ.14ರಂದು ಸವಿತಾ ನಿಧನರಾದರು. ಆ ದಿನದಿಂದ ಐರ್ಲೆಂಡ್‌ ಸಂವಿಧಾನದಲ್ಲಿ ತಿದ್ದುಪಡಿಯಾಗಬೇಕೆಂದು ಹೋರಾಟ ಆರಂಭವಾಗಿತ್ತು.

Comments are closed.