ಕರ್ನಾಟಕ

ರಜನಿಕಾಂತ್‌ ಅವರ ಕಾಲ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ: ವಾಟಾಳ್‌ ನಾಗರಾಜ್

Pinterest LinkedIn Tumblr


ಮೈಸೂರು: ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರ ಕಾಲ ಚಿತ್ರ ಕರ್ನಾಟಕದಲ್ಲಿ ಬಿಡುಗಡೆ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಕನ್ನಡ ಚಳುವಳಿಯ ವಾಟಾಳ್‌ ನಾಗರಾಜ್‌ ಗುಡುಗಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್‌ ಅವರು ರಜನಿ ಕಾಂತ್‌ ಅವರು ಕನ್ನಡ ದ್ರೋಹಿ. ಹೀಗಾಗಿ ಅವರ ಚಿತ್ರಕ್ಕೆ ಕರ್ನಾಟಕದಲ್ಲಿ ಅವಕಾಶ ನೀಡಬಾರದು. ಚಿತ್ರ ಬಿಡುಗಡೆಯಾದಲ್ಲಿ ಕನ್ನಡಪರ ಸಂಘಟನೆಗಳು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ರಜನಿಕಾಂತ್‌ ಅವರು ಕೆಲ ದಿನಗಳ ಹಿಂದೆ ಸುಪ್ರೀಂ ಕೋರ್ಟ್‌ ಆದೇಶದಂತೆ ತಮಿಳುನಾಡಿಗೆ ಕಾವೇರಿ ನೀಡಬೇಕು ಎಂದಿದ್ದರು. ಈ ಹೇಳಿಕೆ ಕನ್ನಡ ಪರ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿತ್ತು.

ರಜನಿ ನಟಿಸಿರುವ ಬಹುನಿರೀಕ್ಷಿತ ಚಿತ್ರ ಜೂನ್‌ 7 ರಂದು ವಿಶ್ವಾದ್ಯಂತ ಬಿಡುಗಡೆ ಯಾಗಲಿದೆ. ಚಿತ್ರದಲ್ಲಿ ಹುಮಾ ಖುರೇಷಿ , ಈಶ್ವರಿ ರಾವ್‌, ಧನುಷ್‌ ಅವರು ಮುಖ್ಯ ಭೂಮಿಕೆಯಲ್ಲಿದ್ದಾರೆ.

ಬಿಜೆಪಿ ಬಂದ್‌ಗೆ ಬೆಂಬಲ ಇಲ್ಲ

ಸಮ್ಮಿಶ್ರ ಸರ್ಕಾರ ರೈತ ಸಾಲ ಮನ್ನಾ ಘೋಷಿಸದಿದ್ದುದಕೆ ಬಿಜೆಪಿ ಕರೆ ನೀಡಿರುವ ರಾಜ್ಯ ಬಂದ್‌ ಕುರಿತು ಪ್ರತಿಕ್ರಿಯಿಸಿ ಯಾವ ಕಾರಣಕ್ಕಾಗಿ ಬಿಜೆಪಿ ಬಂದ್‌ಗೆ ಕರೆ ನೀಡಿದೆ. ನಾವು ಬಂದ್‌ಗೆ ಕರೆ ನೀಡಿದಾಗ ಬೆಂಬಲ ನೀಡಿರಲಿಲ್ಲ . ಹಾಗಾಗಿ ನಾವು ಬಂದ್‌ಗೆ ಬೆಂಬಲ ನೀಡಿರುವ ಪ್ರಶ್ನೆಯೇ ಇಲ್ಲ ಎಂದರು.

ನನ್ನ ಬಗ್ಗೆ ಇಲ್ಲ ಸಲ್ಲದ ಅಪಪ್ರಚಾರ ಮಾಡಿದಿರಿ, ಏನೆಲ್ಲಾ ಜರಿದಿರಿ ಆದರೆ ನಾವು ಯಡಿಯೂರಪ್ಪ ಅವರ ವಿರುದ್ಧ ಆ ರೀತಿ ಮಾಡುವುದಿಲ್ಲ. ಯಡಿಯೂರಪ್ಪ ಅವರು ಮಹದಾಯಿ ಹೋರಾಟಕ್ಕೆ ಬೆಂಬಲ ನೀಡಿರಲಿಲ್ಲ ಎಂದರು.

Comments are closed.