ಕರ್ನಾಟಕ

ರಾಷ್ಟ್ರೀಯ ರಾಜಕಾರಣಕ್ಕೆ ಹೊಸ ಮುನ್ನುಡಿ ಬರೆಯುತ್ತಿರುವ ಪ್ರಾದೇಶಿಕ ನಾಯಕರು

Pinterest LinkedIn Tumblr

ಜೆಡಿಎಸ್‌ -ಕಾಂಗ್ರೆಸ್‌ ಮೈತ್ರಿ ಸರಕಾರದ ನೂತನ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಪದಗ್ರಹಣ ಸಮಾರಂಭ ರಾಷ್ಟ್ರೀಯ ರಾಜಕಾರಣಕ್ಕೆ ಹೊಸ ಮುನ್ನುಡಿ ಬರೆಯುವ ಸ್ಪಷ್ಟ ಸೂಚನೆ ನೀಡಿದೆ. ಹಿಂದೊಮ್ಮೆ ತೃತೀಯ ರಂಗಕ್ಕೆ ಬಲ ತುಂಬಿದ್ದ ಕರ್ನಾಟಕದ ನೆಲ ಇದೀಗ, ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ಶಾ ನೇತೃತ್ವದ ಬಿಜೆಪಿ ದೈತ್ಯಶಕ್ತಿ ವಿರುದ್ಧ ಮಹಾ ಮೈತ್ರಿಕೂಟವನ್ನು ಗಟ್ಟಿಗೊಳಿಸುವ ವೇದಿಕೆ ಅಣಿಗೊಳಿಸಿದೆ.

ಕರ್ನಾಟಕದಲ್ಲಿ ಮತ್ತೆ ಗದ್ದುಗೆ ಹಿಡಿದು ತನ್ನ ಪಾಲಿನ ‘ದಕ್ಷಿಣ ಕರ್ನಾಟಕದ ಹೆಬ್ಬಾಗಿಲು’ ತೆರೆಯುವ ಬಿಜೆಪಿ ಆಸೆ ತಕ್ಷಣಕ್ಕೆ ಕೈಗೂಡಲಿಲ್ಲ. ಈ ಅನಿರೀಕ್ಷಿತ ಬೆಳವಣಿಗೆಯೇ ಮುಂದಿನ ವರ್ಷ ಎದುರಾಗುತ್ತಿರುವ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಒಟ್ಟುಗೂಡುವ ಪ್ರಯತ್ನ ನಡೆಸಿದ್ದ ಬಿಜೆಪಿ ವಿರೋಧಿಗಳಿಗೆ ಬಲ ತುಂಬಿದೆ. ಹೀಗಾಗಿ, ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಎಚ್‌.ಡಿ.ಕುಮಾರಸ್ವಾಮಿ ಅಧಿಕಾರ ಸ್ವೀಕಾರ ಮಾಡಿರುವ ಹೊತ್ತಿನ ಸಂಭ್ರಮ ಕೇವಲ ಜೆಡಿಎಸ್‌ ಹಾಗೂ ಅಧಿಕಾರದ ಪಾಲುದಾರ ಪಕ್ಷವಾದ ಕಾಂಗ್ರೆಸ್‌ಗೆ ಸೀಮಿತವಾಗದೆ ರಾಷ್ಟ್ರ ಮಟ್ಟದಲ್ಲಿ ಮಹತ್ವ ಪಡೆದುಕೊಂಡಿದೆ.

ಕೇಂದ್ರದಲ್ಲಿ ಪ್ರಧಾನಿ ಮೋದಿ ನಾಯಕತ್ವದಲ್ಲಿ ಗದ್ದುಗೆ ಹಿಡಿದ ಬಳಿಕ 2014ರಿಂದಲೂ ಬಿಜೆಪಿ ಒಂದೊಂದೇ ರಾಜ್ಯ ಗೆದ್ದು ದೇಶದ ಭೂಪಟದಲ್ಲಿ ‘ಕೇಸರಿ’ ಗುರುತು ದಾಖಲಿಸುತ್ತಾ ಬಂದಿತ್ತು. ಬಿಜೆಪಿ ಸರಣಿ ಗೆಲುವು ಒಂದೆಡೆಯಾದರೆ, ಕಾಂಗ್ರೆಸ್‌ ನೆಲೆ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಕುಗ್ಗುತ್ತಾ ಬಂದಿತ್ತು. ಬಿಜೆಪಿ ಅಬ್ಬರದಲ್ಲಿ ಪ್ರಾದೇಶಿಕ ಶಕ್ತಿಗಳ ಸಾಮರ್ಥ್ಯ‌ ಕ್ಷೀಣಿಸುತ್ತಿತ್ತು. ಈ ಬೆಳವಣಿಗೆಗಳ ನಡುವೆಯೇ ಮೋದಿ ಹಾಗೂ ಬಿಜೆಪಿ ವಿರೋಧಿ ಶಕ್ತಿಗಳು ಒಟ್ಟುಗೂಡುವ ಪ್ರಯತ್ನ ಚಾಲನೆ ಪಡೆದುಕೊಂಡಿತ್ತು. ಈ ಪ್ರಯತ್ನಗಳು ಇದೀಗ, ಕನ್ನಡದ ನೆಲದಲ್ಲಿ ಮೂರ್ತ ಸ್ವರೂಪ ಪಡೆದುಕೊಳ್ಳುವ ಸ್ಪಷ್ಟ ಸಾಧ್ಯತೆಗಳು ಗೋಚರಿಸಿವೆ.

ಕೇಂದ್ರದಲ್ಲಿ ಅಧಿಕಾರವಿರುವ ಪಕ್ಷ ಕರ್ನಾಟಕದಲ್ಲಿ ಗದ್ದುಗೆ ಹಿಡಿದ ನಿದರ್ಶನಗಳು ರಾಜ್ಯ ರಾಜಕಾರಣದಲ್ಲಿ ಅಪರೂಪ. ಆದರೆ, ಈ ಸಾಧ್ಯತೆ ಈ ಬಾರಿ ತಲೆಕೆಳಗಾಗಲಿದೆ ಎಂಬ ಅಭಿಪ್ರಾಯ ಚುನಾವಣಾ ಪೂರ್ವದಲ್ಲೇ ಕಾಣಿಸಿತ್ತು. ದೇಶದ ಎಲ್ಲ ಭಾಗಗಳಿಗೂ ಗಟ್ಟಿ ನೆಲೆ ವಿಸ್ತರಿಸಿಕೊಂಡು ಸಾಗಿದ್ದ ಬಿಜೆಪಿಗೆ ದಕ್ಷಿಣ ಭಾರತದತ್ತ ಸಾಗಲು ಕರ್ನಾಟಕದ ಹೆಬ್ಬಾಗಿಲನ್ನು ಈ ಚುನಾವಣೆ ತೆರೆಯಲಿದೆ ಎಂಬ ಖಚಿತ ವಿಶ್ವಾಸ ಪ್ರಧಾನಿ ಮೋದಿ ಹಾಗೂ ಅಮಿತ್‌ಶಾ ಜೋಡಿಯದ್ದಾಗಿತ್ತು. ಇದೇ ವಿಶ್ವಾಸದಲ್ಲಿ ಇಬ್ಬರೂ ನಾಯಕರು ಚುನಾವಣಾ ಪ್ರಚಾರದ ಅಖಾಡದಲ್ಲಿ ದೊಡ್ಡ ಸದ್ದು ಮಾಡಿದ್ದಲ್ಲದೆ, ಗೆಲುವಿಗಾಗಿ ಹೊಸಹೊಸ ತಂತ್ರಗಾರಿಕೆಗಳನ್ನೂ ಪ್ರಯೋಗಿಸಿದರು.

ರಾಜ್ಯದಲ್ಲಿ ಬಿಜೆಪಿಯ ‘ಅಶ್ವಮೇಧ’ ಕುದುರೆ ಕಟ್ಟಿ ಹಾಕುವ ಶಕ್ತಿ ತಾಕತ್ತು ಇರುವುದು ತಮಗೆ ಮಾತ್ರ ಎಂದು ಹೇಳಿಕೊಂಡಿದ್ದ ಜೆಡಿಎಸ್‌ ನಾಯಕರು ನಿಜಕ್ಕೂ ಬಿಜೆಪಿ ಹಾದಿಗೆ ಮುಳ್ಳಾದರು. ಅತಂತ್ರ ವಿಧಾನಸಭೆ ನಿರ್ಮಾಣವಾಗಿ ನಿರೀಕ್ಷೆಯಂತೆ ಜೆಡಿಎಸ್‌ ‘ಕಿಂಗ್‌ ಮೇಕರ್‌’ ಸ್ಥಾನದಲ್ಲಿ ಮಹತ್ವ ಪಡೆದುಕೊಂಡಿತು. ತನ್ನ ಪಾಲಿನ ಮತ್ತೊಂದು ದೊಡ್ಡ ರಾಜ್ಯವನ್ನೂ ಸುಲಭವಾಗಿ ಬಿಜೆಪಿ ತೆಕ್ಕೆಗೆ ಒಪ್ಪಿಸಿ ಕೂರಲು ಸಿದ್ದವಿಲ್ಲದ ಕಾಂಗ್ರೆಸ್‌ ಪಕ್ಷವು ಜೆಡಿಎಸ್‌ ಅನ್ನೇ ‘ಕಿಂಗ್‌’ಸ್ಥಾನದಲ್ಲಿ ಕೂರಿಸಿ ಸರಕಾರದ ಭಾಗವಾಯಿತು. ದೇಶದಲ್ಲಿ ನಡೆಯುತ್ತಿರುವ ಮೋದಿ ವಿರೋಧಿ ರಾಜಕಾರಣ ಈ ಮೈತ್ರಿಯ ಬೆನ್ನಿಗೆ ನಿಂತಿದ್ದು ರಾಷ್ಟ್ರೀಯ ಮಟ್ಟದಲ್ಲಿ ಪರ್ಯಾಯ ರಾಜಕಾರಣದ ಪ್ರಯತ್ನಕ್ಕೆ ಆರಂಭಿಕ ಯಶಸ್ಸು ಎಂದೇ ವಿಶ್ಲೇಷಿಸಲಾಗುತ್ತಿದೆ.

ಮತ್ತೊಮ್ಮೆ ವೇದಿಕೆ

ರಾಷ್ಟ್ರೀಯ ರಾಜಕಾರಣದಲ್ಲಿ ತೃತೀಯರಂಗದ ಯಶಸ್ಸಿಗೆ ಹಿಂದೆಲ್ಲಾ ಕರ್ನಾಟಕ ದೊಡ್ಡ ಬಲ ತುಂಬಿತ್ತು. ಇದೀಗ, ಮತ್ತೆ ದೇಶದಲ್ಲಿ ಪರ್ಯಾಯ ರಾಜಕಾರಣದ ಸಾಧ್ಯತೆಗೆ ಕನ್ನಡ ನೆಲವೇ ವೇದಿಕೆಯಾಗಿದೆ. ಚುನಾವಣೆ ಸಂದರ್ಭದಲ್ಲೇ ಜೆಡಿಎಸ್‌ ಪಕ್ಷಕ್ಕೆ ಬಿಎಸ್ಪಿಯ ಮಾಯಾವತಿ, ತೆಲಂಗಾಣ ಸಿಎಂ ಚಂದ್ರಶೇಖರರಾವ್‌ ಜೆಡಿಎಸ್‌ಗೆ ಬೆಂಬಲ ನೀಡಿದ್ದರೆ, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರೂ ಪರೋಕ್ಷ ಸಹಕಾರ ನೀಡಿದ್ದರು. ಅನಿರೀಕ್ಷಿತವಾಗಿ ಜೆಡಿಎಸ್‌ -ಕಾಂಗ್ರೆಸ್‌ ಮೈತ್ರಿ ಸರಕಾರ ರಾಜ್ಯದಲ್ಲಿ ಅಸ್ತಿತ್ವಕ್ಕ್ಕೆ ಬಂದಿರುವುದು ದೇಶದ ಪ್ರಾದೇಶಿಕ ಶಕ್ತಿಗಳನ್ನು ಒಗ್ಗೂಡಿಸುವ ಆಸೆಗೆ ನೀರೆರದಿದೆ ಮತ್ತು ಕಾಂಗ್ರೆಸ್‌ ಒಳಗೊಂಡು ಬಿಜೆಪಿ ವಿರೋಧಿ ಶಕ್ತಿಗಳ ನಡುವಿನ ಈ ಒಗ್ಗಟ್ಟು ಮುಂದಿನ ಸಾರ್ವತ್ರಿಕ ಚುನಾವಣೆ ವರೆಗೂ ವಿಸ್ತರಣೆಯಾಗುವ ಸಾಧ್ಯತೆಗಳು ಖಚಿತವಾಗಿವೆ.

ಮುಂಬರುವ ಲೋಕಸಭೆ ಚುನಾವಣೆ ಸೇರಿದಂತೆ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್‌ ಒಳಗೊಂಡು ಬಹುಪಾಲು ಎಲ್ಲ ರಾಜಕೀಯ ಪಕ್ಷಗಳ ಗುರಿ ಬಿಜೆಪಿಯನ್ನು ಹಣಿಯುವುದು ಎಂಬುದು ಸ್ಪಷ್ಟವಾಗಿದೆ. ಕುಮಾರಸ್ವಾಮಿ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡ ಸೀತಾರಾಂ ಯಚೂರಿ, ಅರವಿಂದ ಕೇಜ್ರಿವಾಲ್‌, ಮಾಯಾವತಿ, ಮಮತಾ ಬ್ಯಾನರ್ಜಿ, ಪಿಣರಾಯಿ ವಿಜಯ್‌, ಅಖಿಲೇಶ್‌ ಯಾದವ್‌, ತೇಜಸ್ವಿ ಯಾದವ್‌, ಚಂದ್ರಬಾಬು ನಾಯ್ಡು, ಅಜಿತ್‌ಸಿಂಗ್‌, ಕ್ಯಾಪ್ಟನ್‌ ಅಮರೀಂದರ್‌ಸಿಂಗ್‌, ನವೀನ್‌ ಪಾಟ್ನಾಯಕ್‌, ಕೆ.ಚಂದ್ರಶೇಖರರಾವ್‌ ತಮ್ಮೆಲ್ಲರ ‘ಸಮಾನ ಎದುರಾಳಿ’ ವಿರುದ್ಧ ಒಟ್ಟುಗೂಡುವ ಪ್ರಯತ್ನ ಇನ್ನಷ್ಟು ಚುರುಕುಗೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ.

Comments are closed.