ರಾಷ್ಟ್ರೀಯ

ಲಷ್ಕರೆ ತಯ್ಯಬಾ ಸಂಘಟನೆಯ ವಿದ್ಯಾರ್ಥಿ ವಿಭಾಗದಿಂದ ಗುಪ್ತಚರ ಇಲಾಖೆ ಬೇಧಿಸಲಾಗದ ಮೊಬೈಲ್‌ ಅಭಿವೃದ್ಧಿ!

Pinterest LinkedIn Tumblr


ಹೊಸದಿಲ್ಲಿ: ಪಾಕಿಸ್ತಾನ ಮೂಲದ ಉಗ್ರ ಹಫೀಸ್‌ ಸಯೀದ್‌ ನೇತೃತ್ವದ ಲಷ್ಕರೆ ತಯ್ಯಬಾ ಸಂಘಟನೆಯ ವಿದ್ಯಾರ್ಥಿ ವಿಭಾಗವು ಗುಪ್ತಚರ ಇಲಾಖೆಯೂ ಬೇಧಿಸಲಾಗದಂತಹ ಮೊಬೈಲ್‌ ಫೋನ್‌ಗಳನ್ನು ಅಭಿವೃದ್ಧಿಪಡಿಸಿರುವ ವಿಷಯ ಬೆಳಕಿಗೆ ಬಂದಿದೆ. ಲಷ್ಕರ್‌ ಸಂಘಟನೆಯ ಸದಸ್ಯರೊಂದಿಗೆ ಆಂತರಿಕ ಸಂವಹನ ಮಾಡುವುದಕ್ಕಾಗಿಯೇ ಈ ಮೊಬೈಲ್‌ ಅನ್ನು ತಯಾರಿಸಲಾಗಿದೆ ಎಂದು ವಿಚಾರಣೆ ವೇಳೆ ಬಂಧಿತ ಲಷ್ಕರೆ ಉಗ್ರನೊಬ್ಬ ಬಾಯ್ಬಿಟ್ಟಿದ್ದಾನೆ.

ಅಲ್‌ ಮೊಹಮ್ಮದೀಯ ಸ್ಟೂಡೆಂಟ್ಸ್‌(ಎಎಂಎಸ್‌) ವಿದ್ಯಾರ್ಥಿ ಸಂಘಟನೆ ಈ ಮೊಬೈಲ್‌ ಅನ್ನು ತಯಾರಿಸಿದ್ದು, ನಿರ್ದಿಷ್ಟ ಚಿಪ್‌ನ್ನು ಮೊಬೈಲ್‌ಗೆ ಅಳವಡಿಕೆ ಮಾಡಿದ ಕೂಡಲೇ ಮೊಬೈಲ್‌ ಹತ್ತಿರದಲ್ಲೇ ಇರುವ ಟವರ್‌ನೊಂದಿಗೆ ಸಂಪರ್ಕ ಸಾಧಿಸುತ್ತದೆ. ಈ ಮೊಬೈಲ್‌ ಹ್ಯಾಂಡ್‌ಸೆಟ್‌ನಿಂದ ಮಾಡಿದ ಕರೆಗಳನ್ನು ಗುಪ್ತಚರ ಇಲಾಖೆ ಯಾವುದೇ ರೀತಿಯಲ್ಲೂ ಪತ್ತೆ ಮಾಡುವುದಕ್ಕೆ ಸಾಧ್ಯವಿಲ್ಲ, ಒಂದು ವೇಳೆ ಗುಪ್ತಚರ ಇಲಾಖೆ ಮೊಬೈಲ್‌ ಕರೆಯನ್ನು ಪತ್ತೆ ಮಾಡಲು ಯತ್ನಿಸಿದರೆ ತಕ್ಷ ಣವೇ ಕರೆ ಕಡಿತಗೊಳ್ಳುತ್ತದೆ.

ಅಂಡರ್‌ಗ್ರೌಂಡ್‌ನಲ್ಲಿ ತರಬೇತಿ: ಅಷ್ಟೇ ಅಲ್ಲ, ಎಲ್‌ಇಟಿ ಸಂಘಟನೆಯು ಉಗ್ರರಿಗೆ ಅಂಡರ್‌ಗ್ರೌಂಡ್‌ ಶಿಬಿರಗಳಲ್ಲಿ ತರಬೇತಿ ನೀಡುತ್ತದೆ ಎಂದು ಮುಲ್ತಾನ್‌ ಮೂಲದ ಎಲ್‌ಇಟಿ ಭಯೋತ್ಪಾದಕ ಜೈಬುಲ್ಲಾ ಎನ್‌ಐಎ ವಿಚಾರಣೆ ವೇಳೆ ಹೇಳಿದ್ದಾನೆ. ಇಂತಹ 7 ಕ್ಯಾಂಪ್‌ಗಳನ್ನು ಎಲ್‌ಇಟಿ ನಡೆಸುತ್ತಿದೆ. ಒಂದೊಂದು ಕ್ಯಾಂಪ್‌ನಲ್ಲೂ ಪ್ರತ್ಯೇಕ ವಿಷಯದ ಬಗ್ಗೆ ತರಬೇತಿ ನೀಡಲಾಗುತ್ತದೆ ಎಂದು ಬಂಧಿತ ಮಾಹಿತಿ ನೀಡಿದ್ದಾನೆ. ಮಾ. 3ರಂದು ಭಾರತಕ್ಕೆ ನುಸುಳಿದ್ದ ಈತನನ್ನು ಕುಪ್ವಾರದಲ್ಲಿ ಏ. 07ರಂದು ಬಂಧಿಸಲಾಗಿತ್ತು.

Comments are closed.