ಕರ್ನಾಟಕ

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿಗೆ ಕಾರಣಗಳನ್ನು ಕೇಳಿದ ಸೋನಿಯಾ, ರಾಹುಲ್‌!

Pinterest LinkedIn Tumblr

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಪಕ್ಷದ ವರಿಷ್ಠರಾದ ಸೋನಿಯಾ ಹಾಗೂ ರಾಹುಲ್‌ ಗಾಂಧಿ ಲೋಕಸಭೆ ಚುನಾವಣೆಗೆ ತಯಾರಿ ಮಾಡಿಕೊಳ್ಳುವಂತೆ ಕೆಪಿಸಿಸಿ ಪ್ರಮುಖರಿಗೆ ಸೂಚಿಸಿದ್ದಾರೆ.

ನೂತನ ಸಿಎಂ ಎಚ್‌ಡಿಕೆ ಪ್ರಮಾಣವಚನ ಸಮಾರಂಭಕ್ಕೆ ಆಗಮಿಸಿದ್ದ ಸೋನಿಯಾ, ರಾಹುಲ್‌ ಇದಕ್ಕೂ ಮುನ್ನ ಕಾಂಗ್ರೆಸ್‌ ಶಾಸಕರು ವಾಸ್ತವ್ಯ ಹೂಡಿದ್ದ ಖಾಸಗಿ ಹೋಟೆಲ್‌ಗೆ ಭೇಟಿ ನೀಡಿದ್ದರು. ಈ ವೇಳೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆ ನಡೆಸಲಾಯಿತು. ಜತೆಗೆ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸಿದರು. ಇದು ಸೋಲಿನ ಆತ್ಮಾವಲೋಕನ ಸಭೆಯಾಗಿ ಮಾರ್ಪಟ್ಟಿತು ಎಂದು ತಿಳಿದು ಬಂದಿದೆ.

ಹಿರಿಯ ನಾಯಕರೊಂದಿಗೆ ಸಮಾಲೋಚಿಸುವಾಗ ಪಕ್ಷದ ಸೋಲಿಗೆ ಕಾರಣವೇನು? 5 ವರ್ಷ ಆಡಳಿತ ನಡೆಸಿದ ಬಳಿಕವೂ ಎಡವಿದ್ದೆಲ್ಲಿ? ಎಂದು ಪ್ರಶ್ನಿಸುವುದರ ಜತೆಗೆ ಈ ಕುರಿತು ವಿವರವಾದ ವರದಿ ನೀಡುವಂತೆಯೂ ಸೂಚಿಸಿದರು. ಜೆಡಿಎಸ್‌ನೊಂದಿಗಿನ ಹೊಂದಾಣಿಕೆಯ ಸಾಧಕ, ಬಾಧಕದ ಬಗ್ಗೆಯೂ ಪ್ರಸ್ತಾಪಿಸಿದರು. ಲೋಕಸಭೆ ಚುನಾವಣೆಗೆ ತಯಾರಿ ಮಾಡಿಕೊಳ್ಳಬೇಕಿದ್ದು ಈ ಹಂತದಲ್ಲಿ ಜೆಡಿಎಸ್‌ ಅನ್ನು ಯಾವ ರೀತಿಯಲ್ಲಿ ವಿಶ್ವಾಸದಲ್ಲಿಟ್ಟುಕೊಂಡು ಹೋಗಬೇಕು ಎಂಬ ಬಗ್ಗೆಯೂ ಸ್ಪಷ್ಟತೆಗೆ ನಿರ್ದೇಶಿಸಿದರು. ಸುಮಾರು 30 ನಿಮಿಷಗಳ ಕಾಲ ಈ ಸಭೆ ನಡೆಯಿತು.

ನಮ್ಮ ಟೈಮ್‌ ಬರ್ತದೆ!
ಸಿಎಲ್‌ಪಿ ಸಭೆಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ ಅಲ್ಲಿಯೂ ಇಂತಹ ಸೋಲಾದದ್ದೇಕೆಂದು ಕೇಳಿದರು. ಬಿಜೆಪಿಯನ್ನು ಅಧಿಕಾರದಿಂದ ದೂರವಿಟ್ಟು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟಕ್ಕೆ ಶಕ್ತಿ ತುಂಬುವ ಏಕೈಕ ಉದ್ದೇಶದಿಂದ ಜೆಡಿಎಸ್‌ಗೆ ಬೆಂಬಲಿಸಲಾಗಿದ್ದು ಈ ಸರಕಾರ ಐದು ವರ್ಷ ಬಾಳಬೇಕು. ಪಕ್ಷ ಸಂಕಷ್ಟದಲ್ಲಿದ್ದು ಎಲ್ಲರೂ ಒಗ್ಗಟ್ಟಿನಿಂದಿರಬೇಕು. ಪರಿಸ್ಥಿತಿ ಹೀಗೆಯೇ ಇರುವುದಿಲ್ಲ. ಮುಂದೆ ಕಾಂಗ್ರೆಸ್‌ಗೂ ಒಳ್ಳೆಯ ದಿನಗಳು ಬರಲಿವೆ ಎಂದು ಧೈರ್ಯ ತುಂಬಿದರು ಎಂದು ಗೊತ್ತಾಗಿದೆ.

ರಾಜ್ಯಾದ್ಯಂತ ಪ್ರವಾಸ ಮಾಡಲಾಗಿದ್ದು ಯಾವ ಹಂತದಲ್ಲೂ ಸರಕಾರ ಹಾಗೂ ಪಕ್ಷದ ವಿರುದ್ಧ ಅಲೆ ಕಾಣಿಸಿರಲಿಲ್ಲ. ಬಿಜೆಪಿ ಪರವಾಗಿ ಒಲವೂ ಇರಲಿಲ್ಲ. ಈ ನಡುವೆಯೂ ಬಿಜೆಪಿ ಗೆಲುವು ದಾಖಲಿಸಿ ಕಾಂಗ್ರೆಸ್‌ಗೆ ಅನಿರೀಕ್ಷಿತ ಸೋಲಾದದ್ದು ಏಕೆಂದು ಅರ್ಥವಾಗುತ್ತಿಲ್ಲ. ಯಾವುದೇ ಅಭಿಪ್ರಾಯ ತಿಳಿಸುವುದಿದ್ದರೆ ನೇರವಾಗಿ ಬಂದು ಭೇಟಿ ಮಾಡಬಹುದು ಎಂದು ರಾಹುಲ್‌ ಗಾಂಧಿ ಸೂಚಿಸಿದರು ಎನ್ನಲಾಗಿದೆ.

ಡಿಕೆಶಿಗೆ ಸೋನಿಯಾ ಅಭಯ

ಡಿಸಿಎಂ ಪಟ್ಟಕ್ಕಾಗಿ ಪಟ್ಟು ಹಾಕಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಅವರಿಗೆ ಮುಂಬರುವ ದಿನಗಳಲ್ಲಿ ಒಳ್ಳೆಯ ಸ್ಥಾನಮಾನ ನೀಡುವುದಾಗಿ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಅಭಯವಿತ್ತಿದ್ದಾರೆ. ಹಿರಿಯ ನಾಯಕರೊಂದಿಗಿನ ಸಭೆಯಲ್ಲಿ ಈ ವಿಚಾರವಾಗಿ ಚರ್ಚಿಸಲಾಯಿತು. ಒಕ್ಕಲಿಗ ಸಮುದಾಯಕ್ಕೆ ಸೇರಿದ ಕುಮಾರಸ್ವಾಮಿ ಸಿಎಂ ಆಗಿರುವಾಗ ಇದೇ ಜನಾಂಗದ ಮತ್ತೊಬ್ಬರನ್ನು ಡಿಸಿಎಂ ಮಾಡಿದರೆ ತಪ್ಪು ಸಂದೇಶ ಹೋಗುತ್ತದೆ. ಹಾಗಾಗಿ ಸ್ವಲ್ಪ ದಿನ ತಾಳ್ಮೆಯಿಂದ ಇರುವಂತೆ ಸೂಚಿಸಿದರು ಎನ್ನಲಾಗಿದೆ.

ಡಿಕೆಶಿ ಸಂಪುಟ ಸೇರ್ಪಡೆಗೆ ಯಾವ ಅಭ್ಯಂತರವೂ ಇಲ್ಲ. ಇದರೊಂದಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನೂ ಅವರಿಗೆ ನೀಡಲು ಹೈಕಮಾಂಡ್‌ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ಸಲ್ಲಿಸುವಂತೆ ನೂತನ ಡಿಸಿಎಂ ಡಾ.ಜಿ. ಪರಮೇಶ್ವರ ಅವರಿಗೆ ಸೂಚಿಸಲಾಗಿದೆ. ನಂತರ ಸರಕಾರದ ವಿಶ್ವಾಸಮತ ಸಾಬೀತು ಬಳಿಕ ರಾಜ್ಯ ಕಾಂಗ್ರೆಸ್‌ ನಾಯಕರು ದಿಲ್ಲಿಗೆ ತೆರಳಲಿದ್ದಾರೆ. ಬಹುತೇಕ ವಾರಾಂತ್ಯದಲ್ಲಿ ಕೆಪಿಸಿಸಿಯ ಹೊಸ ಸಾರಥಿ ನೇಮಕವಾಗಲಿದೆ. ಸಚಿವ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷ ಹುದ್ದೆ ಎರಡನ್ನೂ ಡಿಕೆಶಿ ನಿಭಾಯಿಸಲಿದ್ದಾರೆ. ಈ ಬಗ್ಗೆಯೂ ಸೋನಿಯಾ, ರಾಹುಲ್‌ ಅವರಿಗೆ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಈ ನಡುವೆ ಡಿಸಿಎಂ ಪರಮೇಶ್ವರ ಅವರು ಗುರುವಾರ ಸುದ್ದಿಗೋಷ್ಠಿ ನಡೆಸಲಿದ್ದು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ.

Comments are closed.