ರಾಷ್ಟ್ರೀಯ

ನಕ್ಸಲರಿಂದ ಛತ್ತೀಸಗಢದ ಬಿಜೆಪಿ ಸಂಸದ ವಿಕ್ರಂ ಉಸೇಂದಿ ಅವರ ತೋಟದ ಮನೆ ಸ್ಫೋಟ!

Pinterest LinkedIn Tumblr


ರಾಯ್ಪುರ: ಛತ್ತೀಸಗಢ ಮುಖ್ಯಮಂತ್ರಿ ರಮಣ್‌ ಸಿಂಗ್‌ ಅವರ ಭೇಟಿಗೂ ಮುನ್ನ ರಾಜ್ಯದ ಕಂಕೇರ್‌ ಜಿಲ್ಲೆಯಲ್ಲಿರುವ ಬಿಜೆಪಿ ಸಂಸದ ವಿಕ್ರಂ ಉಸೇಂದಿ ಅವರ ತೋಟದ ಮನೆಯ ಮೇಲೆ ಸುಧಾರಿತ ಸ್ಫೋಟಕ ಸಾಧನ(ಐಇಡಿ) ಬಳಸಿ ನಕ್ಸಲರು ದಾಳಿ ನಡೆಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಬಿಜೆಪಿ ಸಂಸದರ ತೋಟದ ಮನೆ ಮೇಲೆ ನಕ್ಸಲರು ಮಂಗಳವಾರ ರಾತ್ರಿ ಬಾಂಬ್‌ ದಾಳಿ ನಡೆಸಿ, ಎರಡು ಕೊಠಡಿಗಳನ್ನು ಧ್ವಂಸ ಮಾಡಿದ್ದಾರೆ. ದಾಳಿಯ ಸಮಯದಲ್ಲಿ ತೋಟದ ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.

ಕಂಕೇರದಲ್ಲಿರುವ ತೋಟದ ಮನೆಯಿಂದ 15 ಕಿ.ಮೀ. ದೂರದಲ್ಲಿರುವ ಅಂತಗಾರ್ಹಗೆ ‘ವಿಕಾಸ ಯಾತ್ರೆ’ಯ ಅಂಗವಾಗಿ ಮುಖ್ಯಮಂತ್ರಿ ರಮಣ್‌ ಸಿಂಗ್‌ ಅವರ ಭೇಟಿ ಬುಧವಾರ ನಿಗದಿಯಾಗಿತ್ತು.

”ನಕ್ಸಲರ ಗುಂಪೊಂದು ಬಿಜೆಪಿ ಸಂಸದರ ತೋಟದ ಮನೆಗೆ ಬಂದು ಅಲ್ಲಿದ್ದ ಕಾವಲುಗಾರನನ್ನು ಅಲ್ಲಿಂದ ತೆರಳುವಂತೆ ಬೆದರಿಸಿದ್ದಾರೆ. ನಂತರ ಸ್ಫೋಟಕಗಳನ್ನು ಬಳಸಿ ಎರಡು ಕೊಠಡಿಗಳನ್ನು ಧ್ವಂಸ ಮಾಡಿದ್ದಾರೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರ ಒಂದು ತಂಡ ಸ್ಥಳಕ್ಕೆ ಧಾವಿಸಿದ್ದು, ನಕ್ಸಲರ ಪತ್ತೆಗಾಗಿ ಶೋಧ ಕಾರ್ಯಾಚರಣೆ ಕೈಗೊಂಡಿದೆ. ಜತೆಗೆ ಈ ಪ್ರದೇಶದಲ್ಲಿ ಭದ್ರತಾ ಪಡೆಗಳು ತಮ್ಮ ಗಸ್ತು ತಿರುಗಾಟವನ್ನು ತೀವ್ರಗೊಳಿಸಿದ್ದಾರೆ,” ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Comments are closed.