ಬೆಂಗಳೂರು: ಸರಕಾರ ರಚಿಸುವಲ್ಲಿ ವಿಫಲರಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ವಿಪಕ್ಷ ನಾಯಕ ಸ್ಥಾನದಲ್ಲಿ ಕುಳಿತುಕೊಳ್ಳಲು ನಿರ್ಧರಿಸಿದ್ದು, ರಾಜ್ಯಾಧ್ಯಕ್ಷ ಸ್ಥಾನ ಬಿಟ್ಟುಕೊಡುವ ಸಾಧ್ಯತೆ ಇದೆ. ಹೀಗಾಗಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೋಭಾ ಕರಂದ್ಲಾಜೆ, ಪ್ರಹ್ಲಾದ್ ಜೋಶಿ, ನಳಿನ್‌ಕುಮಾರ್ ಕಟೀಲು, ಭಗವಂತ ಖೂಬಾ, ಅರವಿಂದ ಲಿಂಬಾವಳಿ ಹಾಗೂ ಸಿ.ಟಿ.ರವಿ ಹೆಸರು ಚರ್ಚೆಯಲ್ಲಿದೆ ಎಂದು ಹೇಳಲಾಗಿದೆ.
ಶಾಸಕಾಂಗ ಪಕ್ಷ, ಪಕ್ಷದ ನಡುವೆ ಸಮನ್ವಯತೆ ಸಾಧಿಸುವವರು ಪಕ್ಷದ ರಾಜ್ಯಾಧ್ಯಕ್ಷರಾದರೆ ಸೂಕ್ತವೆಂಬ ಅಭಿಪ್ರಾಯವಿದ್ದು, ಪ್ರಹ್ಲಾದ್ ಜೋಶಿ ಅಥವಾ ಲಿಂಬಾವಳಿ ಹೆಸರು ಮುಂಚೂಣಿಯಲ್ಲಿದೆ. ಎಚ್. ಡಿ. ಕುಮಾರಸ್ವಾಮಿ ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ಬೇರೆ ಸಮುದಾಯಕ್ಕೆ ಬಿಟ್ಟುಕೊಟ್ಟರೆ, ಕಾಂಗ್ರೆಸ್‌ನಲ್ಲಿ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದರೆ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿ.ಟಿ.ರವಿ ಅವರನ್ನು ನೇಮಕ ಮಾಡಬಹುದೆಂದು ಹೇಳಲಾಗಿದೆ. ಜತೆಗೆ ಶೋಭಾ ಕರಂದ್ಲಾಜೆ, ನಳಿನ್‌ಕುಮಾರ್ ಕಟೀಲು ಹೆಸರು ಸಹ ಪ್ರಸ್ತಾವನೆಯಲ್ಲಿದೆ.
ಇಂದು ಬಿಜೆಪಿ ಕರಾಳ ದಿನ
ರಾಜ್ಯದ ಜನರಿಂದ ತಿರಸ್ಕೃತಗೊಂಡ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಅಪವಿತ್ರ ಮೈತ್ರಿ ಮಾಡಿಕೊಂಡು ಸರಕಾರ ರಚಿಸಲು ಮುಂದಾಗಿವೆ ಎಂದು ಆರೋಪಿಸಿರುವ ಬಿಜೆಪಿ, ಎಚ್.ಡಿ.ಕುಮಾರಸ್ವಾಮಿ ಅಧಿಕಾರ ಸ್ವೀಕರಿಸುವ ಬುಧವಾರ ರಾಜ್ಯಾದ್ಯಂತ ಜನಮತ ವಿರೋಧಿ ದಿನವನ್ನಾಗಿ ಆಚರಿಸಲು ನಿರ್ಧರಿಸಿದೆ. ಅಪವಿತ್ರ ಮೈತ್ರಿ ಸರಕಾರ ರಚನೆ ವಿರುದ್ಧ ಬುಧವಾರ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು. ಕಾರ್ಯಕರ್ತರು ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಲಿದ್ದಾರೆ. ಬೆಂಗಳೂರಿನ ಮೌರ್ಯ ಹೊಟೇಲ್ ಎದುರಿನ ಗಾಂಧಿ ಪ್ರತಿಮೆ ಎದುರು ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಲಿದ್ದಾರೆ.
Comments are closed.