ಕರ್ನಾಟಕ

ವಾಷಿಂಗ್ ಮಷಿನ್ ನಿಂದ ತೊಳೆದ ಬಟ್ಟೆಗಳಲ್ಲಿ ರಂಧ್ರ; ಕಂಪನಿ ವಿರುದ್ಧ ದೂರು ದಾಖಲಿಸಿ ಜಯ ಸಾಧಿಸಿದ!

Pinterest LinkedIn Tumblr


ಬೆಂಗಳೂರು: ವಾಷಿಂಗ್ ಮಶೀನ್‌ನಲ್ಲಿ ತೊಳೆದ ಬಟ್ಟೆಗೆ ರಂಧ್ರವಾಗಿರುವುದಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ ಗೃಹೋಪಯೋಗಿ ಸಾಮಾನು ತಯಾರಿಕೆಗೆ ಹೆಸರಾದ ಪ್ರತಿಷ್ಠಿತ ಕಂಪನಿ ವಿರುದ್ಧ ಕೋರ್ಟ್ ಮೆಟ್ಟಿಲೇರಿ ನ್ಯಾಯ ಪಡೆದುಕೊಂಡಿದ್ದಾನೆ. ದೋಷಪೂರಿತ ಸಾಧನವನ್ನು ಸರಿಪಡಿಸುವಂತೆ ಅಥವಾ ಹಣವನ್ನು ಮರುಪಾವತಿ ಮಾಡುವಂತೆ ಕಂಪನಿಗೆ ಆದೇಶ ನೀಡುವ ಮೂಲಕ ನಗರ ಗ್ರಾಹಕರ ನ್ಯಾಯಾಲಯ ಆತನ ಪರವಾಗಿ ತೀರ್ಪು ನೀಡಿದೆ.

ಘಟನೆ ವಿವರ:

ಮಹಾಲಕ್ಷ್ಮಿ ಬಡಾವಣೆ ನಿವಾಸಿಯಾದ ಶಶಿ ಕುಮಾರ್ ಕೆ. ಆರ್ ಇಂದಿರಾನಗರದ ಅಂಗಡಿಯೊಂದರಿಂದ ಏಪ್ರೀಲ್ 7, 2014ರಂದು ಬಟ್ಟೆ ತೊಳೆಯುವ ಯಂತ್ರವನ್ನು ಖರೀದಿಸಿದ್ದರು. ಒಂದು ವರ್ಷವಾಗುತ್ತಿದ್ದಂತೆ ಅದರಲ್ಲಿ ತೊಳೆಯಲಾದ ಬಟ್ಟೆಗಳಲ್ಲಿ ರಂಧ್ರ ಬೀಳುತ್ತಿರುವುದು ಬೆಳಕಿಗೆ ಬಂತು. ವಾರಂಟಿ ಅವಧಿ ಮುಗಿಯುವುದಕ್ಕೂ ಮೊದಲೇ ಈ ರೀತಿಯಾಗುತ್ತಿರುವುದು ಶಶಿ ಕುಮಾರ್ ಅವರನ್ನು ಕೆರಳಿಸಿತು.

ಜೂನ್ 9, 2015ರಂದು ಅವರು ಕಂಪನಿಯ ಕಸ್ಟಮರ್ ಕೇರ್ ವಿಭಾಗವನ್ನು ಸಂಪರ್ಕಿಸಿ ದೂರನ್ನು ದಾಖಲಿಸಿದರು. ಕಂಪನಿ ತಂತ್ರಜ್ಞನನ್ನು ಕಳುಹಿಸಿ ಯಂತ್ರವನ್ನು ದುರಸ್ತಿ ಮಾಡಿಸಿದ ಬಳಿಕ ಸಮಸ್ಯೆ ನೀಗುವುದರ ಬದಲು ಹೆಚ್ಚಾಯಿತು. ಹೀಗಾಗಿ ಆಗಸ್ಟ್ 13, 2015ರಂದು ಶಶಿಕುಮಾರ್ ಗ್ರಾಹಕ ನ್ಯಾಯಾಲಯದ ಮೊರೆ ಹೋದರು.

ಮೊಕದ್ದಮೆ ದಾಖಲಿಸಿದ 32 ತಿಂಗಳುಗಳ ಬಳಿಕ ಶಶಿಕುಮಾರ್ ಅವರಿಗೆ ನ್ಯಾಯ ದೊರಕಿದ್ದು ವಾಷಿಂಗ್ ಮಶೀನ್‌ನನ್ನು ಬದಲಿಸಿ ಕೊಡುವಂತೆ ಅಥವಾ ಹಣವನ್ನು ಮರುಪಾವತಿಸುವಂತೆ ಕಂಪನಿ ಮತ್ತು ಮಾರಾಟ ಮಾಡಿದ್ದ ಅಂಗಡಿಗೆ ಕೋರ್ಟ್ ಆದೇಶ ನೀಡಿದೆ. ಯಂತ್ರವನ್ನು ಒಂದು ವರ್ಷ ಬಳಸಿರುವ ಹಿನ್ನೆಲೆಯಲ್ಲಿ ಯಂತ್ರದ ಒಟ್ಟು ಮೌಲ್ಯದಲ್ಲಿ 10% ಕಡಿತ ಮಾಡಿಕೊಂಡು ಹಣ ಪಾವತಿಸಿವಂತೆ ಕೋರ್ಟ್ ಹೇಳಿದೆ. ಆದರೆ ಕುಮಾರ್ ಅವರ ನ್ಯಾಯಾಲಯದ ವೆಚ್ಚಗಳಿಗೆ 1,000 ರೂ. ಪಾವತಿಸುವಂತೆ ಸೂಚಿಸಿದೆ.

Comments are closed.