ಬೆಂಗಳೂರು: ಫೇಸ್‌ಬುಕ್‌ನಲ್ಲಿ ಪರಿಚಯವಾಗಿ ನಾಲ್ಕು ವರ್ಷಗಳ ಸಂಬಂಧ, ದೈಹಿಕ ಸಂಪರ್ಕದ ಬಳಿಕ ಮದುವೆ ಮಾಡಿಕೊಳ್ಳಲು ನಿರಾಕರಿಸಿದ ವ್ಯಕ್ತಿಯ ವಿರುದ್ಧ 33 ವರ್ಷದ ಮಹಿಳೆಯೊಬ್ಬರು ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈಶಾನ್ಯ ಭಾರತ ಮೂಲದ ಮಹಿಳೆ, ನಗರದಲ್ಲಿ ಸ್ವಂತ ಉದ್ಯಮದಲ್ಲಿ ತೊಡಗಿದ್ದಾರೆ. ಇವರಿಗೆ 2010ರಲ್ಲಿ ಫೇಸ್‌ಬುಕ್‌ನಲ್ಲಿ ಕೊಡಗು ಮೂಲದ ಪ್ರೀತಂ ಪ್ರಭಾಕರ್ ಎಂಬುವರು ಪರಿಚಯವಾಗಿದ್ದರು. ತಾನು ಕತಾರ್‌ನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿ ಮಹಿಳೆಗೆ ಪರಿಚಯಿಸಿಕೊಂಡಿದ್ದರು. ಪರಿಚಯದ ನಡುವೆ 2014ರ ಏಪ್ರಿಲ್ ತಿಂಗಳಲ್ಲಿ ಬೆಂಗಳೂರಿಗೆ ಬಂದ ಪ್ರೀತಂ, ಮಹಿಳೆಯನ್ನು ಭೇಟಿ ಮಾಡಿ ನಿನ್ನನ್ನು ಪ್ರೀತಿಸುತ್ತಿದ್ದೇನೆ ಮತ್ತು ನಿನ್ನನ್ನೇ ಮದುವೆಯಾಗುತ್ತೇನೆ ಎಂದು ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದರು ಎಂದು ದೂರಿನಲ್ಲಿ ಸಂತ್ರಸ್ತೆ ಆರೋಪಿಸಿದ್ದಾರೆ.
ನನ್ನ ಪಾಲಕರ ಮನವೊಲಿಸುತ್ತೇನೆ ಎಂದು ಹೇಳಿ ಸಿಕ್ಕಿಂನ ಗ್ಯಾಂಗ್ಟಕ್‌ಗೆ ಕರೆದುಕೊಂಡು ಹೋಗಿ ಪಾಲಕರ ಎದುರು ಮದುವೆ ಪ್ರಸ್ತಾಪ ಮಾಡಿದ್ದರು. ಸಿಕ್ಕಿಂನಿಂದ ವಾಪಸ್ ಬಂದ ನಂತರ ನಗರದಲ್ಲಿರುವ ನನ್ನ ಮನೆಗೆ ಸಲುಗೆಯಿಂದ ಬಂದು ಬಲವಂತವಾಗಿ ದೈಹಿಕ ಸಂಪರ್ಕ ಮಾಡಿದ್ದಾರೆ.
ತಾಯಿಯ ವಿರೋಧ: 2017ರಲ್ಲಿ ನಮ್ಮ ಮದುವೆ ವಿಚಾರವನ್ನು ಪ್ರೀತಂ ತಾಯಿಗೆ ತಿಳಿಸಿದಾಗ, ನೀನು ಟಿಬೇಟಿಯನ್ ಹುಡುಗಿ. ಹೀಗಾಗಿ. ಈ ಮದುವೆ ಸಾಧ್ಯವಿಲ್ಲ. ನಮ್ಮ ಮಗನಿಗೆ ಬೇರೆ ಸಂಬಂಧ ನಿಶ್ಚಯವಾಗಿದೆ ಎಂದು ಹೇಳಿದರು. ಅದಾದ ನಂತರ ಪ್ರೀತಂ ಕೂಡಾ ತಾಯಿ ಮಾತಿನಂತೆ ನಡೆದುಕೊಳ್ಳುವುದಾಗಿ ತಿಳಿಸಿ ಮದುವೆಯಾಗಲು ನಿರಾಕರಿಸಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
Comments are closed.