ಕರ್ನಾಟಕ

ವಿಧಾನಪರಿಷತ್‌ ಸದಸ್ಯರಿಗೆ ಸಚಿವ ಸ್ಥಾನ ನೀಡಲು ಉಭಯ ಪಕ್ಷಗಳ ಶಾಸಕರ ಆಕ್ಷೇಪ

Pinterest LinkedIn Tumblr


ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಎರಡೂ ಪಕ್ಷಗಳ ಕಡೆಯಿಂದ ವಿಧಾನಪರಿಷತ್‌ ಸದಸ್ಯರಿಗೆ ಹೆಚ್ಚು ಸಚಿವ
ಸ್ಥಾನ ನೀಡುವ ವಿಚಾರದಲ್ಲಿ ವಿಧಾನಸಭೆ ಸದಸ್ಯರಿಂದ ಆಕ್ಷೇಪಗಳು ವ್ಯಕ್ತವಾಗಿದ್ದು, ಇದು ಕೂಡ ಸಂಪುಟ ರಚನೆಯನ್ನು ಕಗ್ಗಂಟಾಗಿಸುತ್ತಿದೆ.

ಕಾಂಗ್ರೆಸ್‌ನಿಂದ ಎಸ್‌.ಆರ್‌.ಪಾಟೀಲ್‌ ಹೆಸರು ಮುಂಚೂಣಿಯಲ್ಲಿದ್ದು, ಇವರೊಂದಿಗೆ ಎಚ್‌.ಎಂ. ರೇವಣ್ಣ, ಮೋಟಮ್ಮ, ಸಿ.ಎಂ.ಇಬ್ರಾಹಿಂ, ಎಂ.ಆರ್‌. ಸೀತಾರಾಂ ಕೂಡ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಎಸ್‌.ಆರ್‌.ಪಾಟೀಲ್‌, ಎಚ್‌.ಎಂ.ರೇವಣ್ಣ ಅವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸುವ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಒಲವು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಜೆಡಿಎಸ್‌ನಿಂದ ವಿಧಾನಪರಿಷತ್‌ ಸದಸ್ಯರ ಕೋಟಾದಡಿ ಬಸವರಾಜ ಹೊರಟ್ಟಿ ಅವರನ್ನು ಸಂಪುಟಕ್ಕೆ
ಸೇರಿಸಿಕೊಳ್ಳುವುದು ಹಾಗೂ ಬಿ.ಎಂ.ಫಾರೂಕ್‌ ಅವರನ್ನು ಅಲ್ಪಸಂಖ್ಯಾತರ ಕೋಟಾದಡಿ ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಚರ್ಚೆಯೂ ನಡೆಯುತ್ತಿದೆ. ಖುದ್ದು ದೇವೇಗೌಡರು ಬಿ.ಎಂ.ಫಾರೂಕ್‌ ಸಂಪುಟ ಸೇರ್ಪಡೆಗೆ ಆಸಕ್ತಿ ತೋರಿದ್ದಾರೆ.

ಆದರೆ, ವಿಧಾನ ಪರಿಷತ್‌ ಸದಸ್ಯರಿಗೆ ಹೆಚ್ಚಿನ ಅವಕಾಶ ನೀಡಿದರೆ ಜನರಿಂದ ಆಯ್ಕೆಯಾಗಿರುವ ನಮಗೆ ಅನ್ಯಾಯವಾಗುತ್ತದೆ ಎಂಬುದು ಎರಡೂ ಪಕ್ಷಗಳ ಶಾಸಕರ ವಾದ. ಹೀಗಾಗಿ, ವಿಧಾನಸಭೆ ಸದಸ್ಯರಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ. ಭಾನುವಾರ ನಡೆದ ಕಾಂಗ್ರೆಸ್‌ ಶಾಸಕರ ಸಭೆಯಲ್ಲೂ ಈ ಕುರಿತು ಚರ್ಚೆಯಾಗಿದೆ ಎಂದು ತಿಳಿದುಬಂದಿದೆ.

ಮೂಲತಃ ದಕ್ಷಿಣ ಕನ್ನಡ ಮೂಲದ ಬಿ.ಎಂ. ಫಾರೂಕ್‌ ಅವರನ್ನು ಜೆಡಿಎಸ್‌ನಿಂದ ಸಂಪುಟಕ್ಕೆ ಸೇರಿಸಿಕೊಂಡರೆ ಆ ಜಿಲ್ಲೆ ಕೋಟಾ ಮುಗಿದು ಹೋಗುತ್ತದೆ.ಹೀಗಾದರೆ, ಅವಿಭಜಿತ ದಕ್ಷಿಣ ಕನ್ನಡದಲ್ಲಿ (ದಕ್ಷಿಣಕನ್ನಡ ಮತ್ತು ಉಡುಪಿ) ಕಾಂಗ್ರೆಸ್‌ನಿಂದ ಗೆದ್ದುಬಂದಿರುವ ಏಕೈಕ ಶಾಸಕ ಯು.ಟಿ.ಖಾದರ್‌ ಅವರಿಗೆ ಸಚಿವ ಸ್ಥಾನ ಕೈ ತಪ್ಪಬಹುದೆಂಬ ಆತಂಕ ಆ ಭಾಗದ ಕಾಂಗ್ರೆಸ್‌ ನಾಯಕರದು. ಖಾದರ್‌ಗೆ ಸಚಿವ ಸ್ಥಾನ ನೀಡಿ ಜಿಲ್ಲಾ ಉಸ್ತುವಾರಿ ಮಾಡಬೇಕು. ಪಕ್ಷ ಸಂಘಟನೆಗೆ ಇದರಿಂದ ಅನುಕೂಲವಾಗುತ್ತದೆ ಎಂಬುದು ಅವರ ಆಗ್ರಹ. ಈ ಬಗ್ಗೆ ಸಿದ್ದರಾಮಯ್ಯ, ಪರಮೇಶ್ವರ್‌ ಸೇರಿ ನಾಯಕರ ಮೇಲೂ ಅಲ್ಲಿನ ಮುಖಂಡರು ಒತ್ತಡ ಹೇರಿದ್ದಾರೆ ಎಂದು ತಿಳಿದುಬಂದಿದೆ.

ಹಿರಿಯ ಸಚಿವರಿಗೆ ಪಕ್ಷದ ಕೆಲಸ
ಈ ಮಧ್ಯೆ, ಕಾಂಗ್ರೆಸ್‌ನವರಿಗೆ ಪಕ್ಷದ ಕೆಲಸ ವಹಿಸಲು ಮುಂದಾಗಿದೆ. ಮುಂದಿನ ಒಂದು ವರ್ಷದಲ್ಲಿ ಲೋಕಸಭೆ ಚುನಾವಣೆ ಎದುರಾಗುವುದರಿಂದ ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ಕಳೆದ ಬಾರಿ ಸರ್ಕಾರದಲ್ಲಿ ಸಚಿವರಾಗಿದ್ದ ಹಿರಿಯರಿಗೆ ಪಕ್ಷದ ಕೆಲಸ ಹಚ್ಚಲಾಗುವುದು. ಲೋಕಸಭೆ ಚುನಾವಣೆ ಮುಗಿದ ನಂತರ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲಾಗುವುದು ಎಂದು ಹೇಳಲಾಗಿದೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಕೆಲವು ಹಿರಿಯರು ಈ ಬಾರಿ ಸಚಿವ ಸ್ಥಾನ ತ್ಯಾಗ ಮಾಡಬೇಕಾದ ಪರಿಸ್ಥಿತಿಯಿದೆ. ನಾನು ಮಂತ್ರಿ ಮಾಡಿ ಎಂದು ಕೇಳಲ್ಲ, ಆದರೆ, ಕೊಟ್ಟರೆ ಬೇಡ ಎನ್ನಲ್ಲ ಎಂದು ಹೇಳಿದರು.

Comments are closed.