ಕರ್ನಾಟಕ

ಪ್ರಮಾಣವಚನ ಸಮಾರಂಭದಲ್ಲಿ ಸೋನಿಯಾ, ರಾಹುಲ್‌ ಪಾಲ್ಗೊಳ್ಳುವಿಕೆಯನ್ನು ಖಾತರಿಪಡಿಸಿದ ಕುಮಾರಸ್ವಾಮಿ

Pinterest LinkedIn Tumblr

ಹೊಸದಿಲ್ಲಿ: ಕರ್ನಾಟಕದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿಯಾಗಿ ಎಚ್‌.ಡಿ. ಕುಮಾರಸ್ವಾಮಿ ಅವರು ಬುಧವಾರ ಪ್ರಮಾಣ ವಚನ ಸ್ವೀಕರಿಸಲಿದ್ದು, ಸಮಾರಂಭದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ವರಿಷ್ಠ ನಾಯಕಿ ಸೋನಿಯಾ ಗಾಂಧಿ ಪಾಲ್ಗೊಳ್ಳಲಿದ್ದಾರೆ.

ಸೋಮವಾರ ಹೊಸದಿಲ್ಲಿಯಲ್ಲಿ ಕಾಂಗ್ರೆಸ್‌ ವರಿಷ್ಠರನ್ನು ಭೇಟಿ ಮಾಡಿದ ಬಳಿಕ ನಿಯೋಜಿತ ಮುಖ್ಯಮಂತ್ರಿ ಕುಮಾರಸ್ವಾಮಿ ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದರು.

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಕರ್ನಾಟಕದಲ್ಲಿ ಸ್ಥಿರ ಸರಕಾರ ನೀಡಲಿದೆ. ಸರಕಾರದ ರೂಪುರೇಷೆಗಳನ್ನು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಜತೆ ಚರ್ಚಿಸಲಾಗಿದೆ. ಈ ವಿಚಾರದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲು ಕಾಂಗ್ರೆಸ್‌ ಪಕ್ಷದ ಕರ್ನಾಟಕ ಉಸ್ತುವಾರಿ ಹೊತ್ತಿರುವ ಕೆ.ಸಿ ವೇಣುಗೋಪಾಲ್ ಅವರಿಗೆ ರಾಹುಲ್‌ ಗಾಂಧಿ ಅಧಿಕಾರ ನೀಡಿದ್ದಾರೆ. ಮಂಗಳವಾರ ಕೆಸಿವಿ ಸೇರಿದಂತೆ ರಾಜ್ಯ ಕಾಂಗ್ರೆಸ್ ನಾಯಕರ ಜತೆ ಚರ್ಚಿಸಿ ಅಧಿಕಾರ ಹಂಚಿಕೆ ಸೂತ್ರ ಸಿದ್ಧಪಡಿಸಲಾಗುತ್ತದೆ ಎಂದು ಜೆಡಿಎಸ್‌ ನಾಯಕ ಎಚ್‌.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಮೇ 23ರಂದು (ಬುಧವಾರ) ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಕುಮಾರಸ್ವಾಮಿ, ಮೈತ್ರಿ ಸರಕಾರದ ರೂಪುರೇಷೆಗಳ ಬಗ್ಗೆ ಸಮಾಲೋಚನೆ ನಡೆಸಲು ರಾಜಧಾನಿ ದಿಲ್ಲಿಗೆ ಆಗಮಿಸಿದ್ದಾರೆ.

ಇದಕ್ಕೆ ಮೊದಲು ಬಿಎಸ್‌ಪಿ ನಾಯಕಿ ಮಾಯಾವತಿ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಕರ್ನಾಟಕದಲ್ಲಿ ಜೆಡಿಎಸ್‌-ಬಿಎಸ್‌ಪಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದವು. ಫಲಿತಾಂಶದ ಬಳಿಕ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿತ್ತು.

Comments are closed.