ಕರ್ನಾಟಕ

ಪ್ರಮಾಣ ವಚನ ಬಳಿಕ ಸಾಲ ಮನ್ನಾ ತೀರ್ಮಾನ: ಕುಮಾರಸ್ವಾಮಿ

Pinterest LinkedIn Tumblr


ಬೆಂಗಳೂರು: ರಾಜ್ಯಪಾಲರು ಬಹುಮತ ಸಾಬೀತಿಗೆ 15 ದಿನ ಅವಕಾಶ ನೀಡಿದ್ದಾರೆ. ಆದರೆ, ಶೀಘ್ರವಾಗಿ ಬಹುಮತ ಸಾಬೀತು ಪಡಿಸುತ್ತೇವೆ. ಎರಡು ಪಕ್ಷಗಳ ನಡುವೆ ಸಮನ್ವಯ ಸಮಿತಿ ರಚಿಸುತ್ತೇವೆ. ಬಿಜೆಪಿ ಆಪರೇಷನ್ ಕಮಲದ ಭೀತಿ ನಮಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಕೇಂದ್ರದ ಬೆದರಿಕೆಗೆ ಹೆದರಲ್ಲ

ಶನಿವಾರ ರಾತ್ರಿ ರಾಜ್ಯಪಾಲರ ಭೇಟಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರ ಆಹ್ವಾನದ ಮೇರೆಗೆ ಭೇಟಿ ಮಾಡಿದ್ದೇನೆ. ಬಿಜೆಪಿ ಬಹುಮತ ಸಾಬೀತುಪಡಿಸದೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ರಚನೆಗೆ ಆಹ್ವಾನ ನೀಡಿದ್ದಾರೆ. ಸೋಮವಾರ ಯಾವ ಸಚಿವರು ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂಬುದನ್ನು ಸಭೆ ನಡೆಸಿ ತೀರ್ಮಾನಿಸುತ್ತೇವೆ. ಕೇಂದ್ರ ಸರ್ಕಾರ ಐಟಿ, ಇಡಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತದೆ. ಅದಕ್ಕೆಲ್ಲ ನಾವು ಹೆದರಲ್ಲ ಎಂದು ಹೇಳಿದರು.

ಪ್ರಮಾಣ ವಚನ ಬಳಿಕ ಸಾಲ ಮನ್ನಾ

ಕಾಂಗ್ರೆಸ್ ಹಿರಿಯ ನಾಯಕರೆಲ್ಲ ನಮಗೆ ಬೆಂಬಲ ನೀಡಿದ್ದಾರೆ. ಜೆಡಿಎಸ್, ಕಾಂಗ್ರೆಸ್, ಬಿಎಸ್​ಪಿ ಕಾರ್ಯಕರ್ತರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಗುಲಾಂ ನಬಿ ಆಜಾದ್‌ ನೇತೃತ್ವದಲ್ಲಿ ಸಭೆ ಸೇರಲಿದ್ದೇವೆ. ಪೂರ್ಣಾವಧಿ ಸರ್ಕಾರ ನಡೆಸಲು ಹೊಂದಾಣಿಕೆ ಅಗತ್ಯ. ಕಾಂಗ್ರೆಸ್‌ ಜತೆಗಿನ ಹೊಂದಾಣಿಕೆ ಬಗ್ಗೆ ಚರ್ಚಿಸುತ್ತೇವೆ. ಪ್ರಮಾಣ ವಚನ ಬಳಿಕ ಸಾಲಮನ್ನಾ ಬಗ್ಗೆ ತೀರ್ಮಾನಿಸುವೆ ಎಂದರು.

ಗಣ್ಯರಿಗೆ ಆಹ್ವಾನ
ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ಮಧ್ಯಾಹ್ನ 12 ರಿಂದ 1.15ರೊಳಗೆ ಪ್ರಮಾಣ ವಚನ ಸ್ವೀಕರಿಸುತ್ತೇನೆ. ಪ್ರಮಾಣ ವಚನ ಕಾರ್ಯಕ್ರಮಕ್ಕೆ ಮಾಯಾವತಿ, ಅಖಿಲೇಶ್‌ ಯಾದವ್‌, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರಿಗೂ ಆಹ್ವಾನ ನೀಡುತ್ತೇನೆ. ಇತರೆ ಪ್ರಮುಖ ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಶೃಂಗೇರಿಗೆ ಭೇಟಿ ನೀಡಲಿರುವ ಎಚ್‌ಡಿಕೆ

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಸೋಮವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ನಂತರ ಸಂಜೆ ಶೃಂಗೇರಿಗೆ ತೆರಳಿ ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ. ಚುನಾವಣೆ ಪೂರ್ವದಲ್ಲಿ ದೇವೇಗೌಡರ ಕುಟುಂಬ ಶೃಂಗೇರಿಯಲ್ಲಿ ಅತಿರುದ್ರ ಮಹಾಯಾಗ ಮಾಡಿಸಿತ್ತು. ಕುಟುಂಬದ ಎಲ್ಲ ಸದಸ್ಯರು ಯಾಗದಲ್ಲಿ ಪಾಲ್ಗೊಂಡಿದ್ದರು.

Comments are closed.