ಕರ್ನಾಟಕ

ಯಡಿಯೂರಪ್ಪರನ್ನು ಕೆಳಗಿಳಿಸಿ ತಪ್ಪಿಸಿಕೊಂಡೆವು ಎಂದು ಭಾವಿಸಬೇಡಿ…ನಿಮನ್ನು ಮಲಗಲು ಬಿಡುವುದಿಲ್ಲ: ಬಿಜೆಪಿ ಶಾಸಕ ಶ್ರೀರಾಮುಲು ಎಚ್ಚರಿಕೆ

Pinterest LinkedIn Tumblr

ಬಳ್ಳಾರಿ: ಯಡಿಯೂರಪ್ಪ ಅವರನ್ನು ಸಿಎಂ ಗಾದಿಯಿಂದ ಕೆಳಗಿಳಿಸಿ ತಪ್ಪಿಸಿಕೊಂಡೆವು ಎಂದು ಭಾವಿಸಬೇಡಿ, ನಿಮನ್ನು ಮಲಗಲು ಬಿಡುವುದಿಲ್ಲ ಎಂದು ಬಿಜೆಪಿ ಶಾಸಕ ಬಿ ಶ್ರೀರಾಮುಲು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.

ನಿನ್ನೆ ನಡೆದ ವಿಶ್ವಾಸ ಮತ ಯಾಚನೆ ವೇಳೆ ಸಿಎಂ ಯಡಿಯೂರಪ್ಪ ಅವರು ಅಲ್ಬಮತದ ಕಾರಣ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಇದೀಗ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ಸರ್ಕಾರ ರಚನೆಗೆ ಕಸರತ್ತು ನಡೆಸುತ್ತಿದ್ದು, ಇದರ ಬೆನ್ನಲ್ಲೇ ಬಿಜೆಪಿಯ ಮೊಳಕಾಲ್ಮೂರು ಶಾಸಕ ಮತ್ತು ರೆಡ್ಡಿ ಆಪ್ತ ಬಿ ಶ್ರೀರಾಮುಲು, ‘ತಪ್ಪಿಸಿಕೊಂಡಿದ್ದೇವೆ ಎಂದು ತಿಳಿಯಬೇಡಿ , ಪ್ರಬಲ ವಿರೋಧ ಪಕ್ಷವಾಗಿ ನಿಮ್ಮನ್ನು ಮಲಗಲು ಬಿಡುವುದಿಲ್ಲ’ ಎಂದು ಗುಡುಗಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು ‘ಕಾಂಗ್ರೆಸ್‌ ನಾಯಕರಿಗೆ ಬಿಜೆಪಿ ಅಧಿಕಾರಕ್ಕೆ ಬಂದರೆ ಜೈಲು ಪಾಲಾಗುವ ಭೀತಿ ಎದುರಾಗಿತ್ತು. ಹೀಗಾಗಿ 78 ಸ್ಥಾನಗಳನ್ನು ಗೆದ್ದರೂ ಜೆಡಿಎಸ್‌ಗೆ ಬೆಂಬಲ ನೀಡಿ ಸರ್ಕಾರ ರಚನೆಗೆ ಮುಂದಾಗಿದೆ. ಸರ್ಕಾರದ ಅವಧಿಯಲ್ಲಿ ಮಾಡಿದ ಅಕ್ರಮಗಳನ್ನು ಮುಚ್ಚಿ ಹಾಕಲು ಮುಂದಾಗಿದೆ. ಆದರೆ ಇದಕ್ಕೆ ನಾವು ಬಿಡುವುದಿಲ್ಲ. ನಿಮ್ಮ ಅಕ್ರಮಗಳನ್ನು ಭ್ರಷ್ಟಾಚಾರಗಳನ್ನು ರಾಜ್ಯದ ಜನರ ಮುಂದೆ ಎಳೆ ಎಳೆಯಾಗಿ ಬಿಚ್ಚಿಡುವ ಕೆಲಸ ಮಾಡುತ್ತೇವೆ’ ಎಂದು ಹೇಳಿದ್ದಾರೆ.

ಅಂತೆಯೇ ‘ಲೋಕಾಯುಕ್ತವನ್ನು ಮುಚ್ಚಿ ಹಾಕಿ ಎಸಿಬಿ ರಚನೆ ಮಾಡಿ ಭ್ರಷ್ಟಾಚಾರಿಗಳಿಗೆ ಪ್ರಾಮಾಣಿಕರು ಎಂದು ಕ್ಲೀನ್‌ ಚಿಟ್‌ ನೀಡುವ ಕೆಲಸ ಮಾಡಿದ್ದಾರೆ. ಯಾವೆಲ್ಲಾ ಅಕ್ರಮಗಳನ್ನು ಮಾಡಿದ್ದಾರೋ ಅವುಗಳನ್ನು ಬಯಲು ಮಾಡುತ್ತೇವೆ’ ಎಂದೂ ಶ್ರೀರಾಮುಲು ಗುಡುಗಿದ್ದಾರೆ.

Comments are closed.