ಕರ್ನಾಟಕ

ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಪತನ ! ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಣೆ

Pinterest LinkedIn Tumblr

ಬೆಂಗಳೂರು: ರಾಜ್ಯ ರಾಜಕೀಯ ಹೈಡ್ರಾಮದಲ್ಲಿ ಕೊನೆಗೂ ಬಿಜೆಪಿಗೆ ಬಹುಮತ ಸಾಬೀತು ಪಡಿಸಲು ವಿಫಲವಾದ ಕಾರಣ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಎರಡೇ ದಿನದಲ್ಲಿ ಪತನಗೊಂಡಿದೆ.

ವಿಧಾನ ಸಭೆಯಲ್ಲಿ ಚುನಾವಣೆ ಫಲಿತಾಂಶ ಬಂದ ಕಳೆದ 5 ದಿನಗಳಿಂದ ಸರಕಾರ ರಚಿಸಲು ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ನಡೆಸಿದ ಸರ್ಕಸ್ ಮುಗಿಯುವ ಹಂತಕ್ಕೆ ಬಂದು ಮುಟ್ಟಿದೆ.

ಯಾವುದೇ ರೀತಿಯ ಬಹುಮತ ಸಾಬೀತು ಪಡಿಸಲು ಮುಂದಾಗದ ಯಡಿಯೂರಪ್ಪ ತಮಗಾಗಿರುವ ನೋವನ್ನು ವ್ಯಕ್ತಪಡಿಸಿ, ರಾಜೀನಾಮೆ ಘೋಷಿಸಿದರು.

ರಾಜ್ಯದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಶಾಸಕರಿದ್ದರು ಕಾಂಗ್ರೆಸ್-ಜೆಡಿಎಸ್ ಕುತಂತ್ರದಿಂದ ನಾವು ಸರಕಾರ ರಚಿಸುವಲ್ಲಿ ವಿಫಲವಾಗಿದ್ದೇವೆ. ರಾಜ್ಯದಲ್ಲಿ ಉತ್ತಮ ಆಡಳಿಯ ನಡೆಸಲು ಯೋಜನೆ ಹಾಕಿಕೊಂಡಿದ್ದೆವು. ಆದರೆ ಕಾಂಗ್ರೆಸ್-ಜೆಡಿಎಸ್ ಕುತಂತ್ರದಿಂದ ಅದು ಆಗಿಲ್ಲ. ನನ್ನ ಹೋರಾಟ ರಾಜ್ಯದ ಜನರ ಪರವಾಗಿ ನಿರಂತರ. ತಾನು ಈ ಸೀದಾ ರಾಜ್ಯಪಾಲರನ್ನು ಭೇಟಿಯಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದೇನೆ ಎಂದು ಯಡಿಯೂರಪ್ಪ ಘೋಷಣೆ ಮಾಡಿದರು.

ಸದನದಲ್ಲಿ ಬಹುಮತ ಸಾಬೀತಿಗೆ ಹೋಗದ ಯಡಿಯೂರಪ್ಪ ನೇರ ತಾನು ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಸದನದಲ್ಲಿ ಹೇಳಿ ಹೊರನಡೆದರು.

ಸದನದಲ್ಲಿ ಒಟ್ಟು 222 ಮಂದಿ ಶಾಶಕರು ಪಾಲ್ಗೊಂಡಿದ್ದರು. ಅದರಲ್ಲಿ 104 ಮಂದಿ ಬಿಜೆಪಿ ಶಾಸಕರು, ಕಾಂಗ್ರೆಸ್ಸಿನ 78 ಮಂದಿ ಶಾಸಕರು, ಜೆಡಿಎಸ್ ನ 38 ಮಂದಿ ಹಾಗು 2 ಪಕ್ಷೇತರರು  ಸದನದಲ್ಲಿ ಉಪಸ್ಥಿತರಿದ್ದರು.

ಬಹುಮತ ಇಲ್ಲದೆಯೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿ.ಎಸ್‌.ಯಡಿಯೂರಪ್ಪ ಶನಿವಾರ ವಿಶ್ವಾಸಮತ ಯಾಚನೆ ಭಾಷಣ ಆರಂಭಿಸಿದರು. ಆದರೆ ಬಳಿಕ ಅದನ್ನು ಹಿಂಪಡೆದು ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡುವುದಾಗಿ ಘೋಷಿಸಿದರು.

104 ಸ್ಥಾನ ಗೆದ್ದ ಬಿಜೆಪಿಗೆ ಸರ್ಕಾರ ರಚಿಸಲು ರಾಜ್ಯಪಾಲ ವಜುಭಾಯಿ ವಾಲಾ ಆಹ್ವಾನ ನೀಡಿದ್ದರು. ಗುರುವಾರ ಬೆಳಿಗ್ಗೆ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ್ದರು.

ಬಹುಮತ ಸಾಬೀತು ಪಡಿಸಲು ರಾಜ್ಯಪಾಲರು 15 ದಿನಗಳ ಗಡುವು ನೀಡಿದ್ದರು. ಆದರೆ, ಕಾಂಗ್ರೆಸ್‌–ಜೆಡಿಎಸ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌; ಶನಿವಾರ ಸಂಜೆಯೊಳಗೆ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸುವಂತೆ ಬಿಜೆಪಿಗೆ ಸೂಚನೆ ನೀಡಿತ್ತು.

ವಿಧಾನಸಭೆಯ 222 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 78 ಸ್ಥಾನ ಗೆದ್ದ ಕಾಂಗ್ರೆಸ್‌ ಮತ್ತು 38 ಸ್ಥಾನ ಗೆದ್ದ ಜೆಡಿಎಸ್‌, ಇಬ್ಬರು ಪಕ್ಷೇತರನ್ನೂ ಸೇರಿಸಿಕೊಂಡು ಮೈತ್ರಿ ಸರ್ಕಾರ ರಚಿಸುವ ಪ್ರಸ್ತಾವವನ್ನು ರಾಜ್ಯಪಾಲರ ಮುಂದಿಡಲಾಗಿತ್ತು.

Comments are closed.