
ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ತಮ್ಮ ಮೊದಲ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು, ಅಧಿಕಾರದ ದಾಹದಿಂದ ಕಾಂಗ್ರೆಸ್ -ಜೆಡಿಎಸ್ ಚುನಾವಣೋತ್ತರ ಮೈತ್ರಿ ಮಾಡಿಕೊಂಡಿವೆ ಎಂದು ಹೇಳಿದರು.
ವಿಧಾನಸೌಧದಲ್ಲಿ ಇಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಎಸ್ ಯಡಿಯೂರಪ್ಪ ಅವರು, ಬಿಜೆಪಿ ಮೇಲೆ ಭರವಸೆ ಇಟ್ಟು ದಾಖಲೆ ಪ್ರಮಾಣದಲ್ಲಿ ಮತದಾನ ಮಾಡಿದ ರಾಜ್ಯದ ಮತದಾರರಿಗೆ ಮೊದಲಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಅವರು ನಮ್ಮ ಪಕ್ಷದ ಮೇಲೆ ಇಟ್ಟಿರುವ ನಂಬಿಕೆಯನ್ನು ಖಂಡಿತಾ ಉಳಿಸಿಕೊಳ್ಳುತ್ತೇನೆ. ಅಂತೆಯೇ ಚುನಾವಣಾ ಪೂರ್ವದಲ್ಲಿ ನಾನು ರಾಜ್ಯದ ಜನತೆಗೆ ನೀಡಿದ್ದ ಭರವಸೆಯಂತೆ ರೈತರ ಸಾಲ ಮನ್ನಾ ಮಾಡಲು ಮುಂದಾಗಿದ್ದೇನೆ. ಈ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇನೆ. ಸೂಕ್ತ ದಾಖಲೆಗಳನ್ನು ಪರಿಶೀಲಿಸಿ ಮಾಹಿತಿ ನೀಡುವಂತೆ ಸೂಚಿಸಿದ್ದೇನೆ. ವರದಿ ದೊರೆತ ಕೂಡಲೇ ಈ ಸಂಬಂಧ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.
ಇದೇ ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಕಿಡಿಕಾರಿದ ಸಿಎಂ ಯಡಿಯೂರಪ್ಪ ಅವರು, ಅಧಿಕಾರದ ದಾಹದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಚುನಾವಣೋತ್ತರ ಮೈತ್ರಿ ಮಾಡಿಕೊಂಡಿದ್ದು, ವಿಶ್ವಾಸ ಮತದಲ್ಲಿ ನಾನು ಖಂಡಿತಾ ಜಯಶೀಲನಾಗುತ್ತೇನೆ ಎಂಬ ಭರವಸೆ ಇದೆ. ಅಂತೆಯೇ ರಾಜ್ಯದ ಜನತೆ, ಬಿಜೆಪಿ ಪಕ್ಷ ಮತ್ತು ಶಾಸಕರು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಹೀಗಾಗಿ ರಾಜ್ಯಪಾಲರು ಸೂಚಿಸಿರುವಂತೆ 15 ದಿನಗಳು ಅಲ್ಲ ಅದಕ್ಕಿಂತ ಮುಂಚಿತವಾಗಿಯೇ ವಿಶೇಷ ಅಧಿವೇಷನ ಕರೆದು ವಿಶ್ವಾಸ ಮತ ಯಾಚಿಸಲಿದ್ದೇನೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದರು.
Comments are closed.