ಕರ್ನಾಟಕ

ಕರ್ನಾಟಕದ 23ನೇ ಮುಖ್ಯಮಂತ್ರಿಯಾದ ಯಡಿಯೂರಪ್ಪರ ರಾಜಕೀಯ ಪಯಣ ! ಎಲ್ಲಿಂದ ಎಲ್ಲಿಯವರೆಗೆ …

Pinterest LinkedIn Tumblr

ನವದೆಹಲಿ: ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರು ಮತ್ತು ಬೆಂಬಲಿಗರ ಉತ್ಸಾಹ, ಪ್ರೋತ್ಸಾಹ, ಕೇಕೆ, ಹಾರೈಕೆಗಳ ನಡುವೆ ಬಿ.ಎಸ್.ಯಡಿಯೂರಪ್ಪ ಕರ್ನಾಟಕದ 23ನೇ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದರು.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆಯಲ್ಲಿ 1943 ಫೆಬ್ರವರಿ 27ರಂದು ಜನಿಸಿದ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಪಿಯುಸಿವರೆಗೆ ಶಿಕ್ಷಣ ಗಳಿಸಿದರು. ನಂತರ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕ್ಲರ್ಕ್ ಆಗಿ ಕೆಲಸಕ್ಕೆ ಸೇರಿದ್ದರು. ನಂತರ ಅವರು ತಮ್ಮ ಜೀವನದಲ್ಲಿ ವೃತ್ತಿ ಬದಲಾವಣೆಗಾಗಿ ಹೋಗಿದ್ದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿಗೆ. ಅಲ್ಲಿ ಅಕ್ಕಿ ಗಿರಣಿಯಲ್ಲಿ ಕ್ಲರ್ಕ್ ಹುದ್ದೆಗೆ ಸೇರಿಕೊಂಡರು.

ಯಡಿಯೂರಪ್ಪನವರ ರಾಜಕೀಯ ಜೀವನ ಆರಂಭವಾಗಿದ್ದು 1970ರಲ್ಲಿ. ಶಿಕಾರಿಪುರ ತಾಲ್ಲೂಕಿನಲ್ಲಿ ಆರ್ ಎಸ್ಎಸ್ ನ ಕಾರ್ಯದರ್ಶಿಯಾಗಿ ನೇಮಕಗೊಂಡರು. ನಂತರ ಶಿಕಾರಿಪುರ ಪುರಸಭೆಗೆ ಚುನಾಯಿತರಾಗಿ ಬಂದರು. ಜನಸಂಘದ ತಾಲ್ಲೂಕು ಘಟಕದ ಅಧ್ಯಕ್ಷರು ಕೂಡ ಆದರು.

ಯಡಿಯೂರಪ್ಪನವರು ವಿಧಾನಸೌಧದ ಮೆಟ್ಟಿಲು ಹತ್ತಿದ್ದು 1983ರಲ್ಲಿ ಮೊದಲ ಬಾರಿಗೆ ಶಿಕಾರಿಪುರದಿಂದ ಶಾಸಕರಾಗಿ ಆಯ್ಕೆಗೊಂಡಾಗ. ನಂತರ ಇಲ್ಲಿಯವರೆಗೆ ಏಳು ಬಾರಿ ಶಾಸಕರಾಗಿ ಚುನಾಯಿತರಾಗಿ ಬಂದಿದ್ದಾರೆ. ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಅಂದು ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿಯವರಿಗೆ ಬೆಂಬಲ ನೀಡಿ ಮೈತ್ರಿ ಸರ್ಕಾರ ರಚಿಸಿ ಭಾರೀ ಹಿನ್ನಡೆ ಕಂಡರು. ಜೆಡಿಎಸ್ ಮತ್ತು ಬಿಜೆಪಿ ಒಪ್ಪಂದ ಮಾಡಿಕೊಂಡು ಮೊದಲ 20 ತಿಂಗಳು ಕುಮಾರಸ್ವಾಮಿ ಮತ್ತು ನಂತರದ 20 ತಿಂಗಳು ಯಡಿಯೂರಪ್ಪನವರು ಮುಖ್ಯಮಂತ್ರಿಯಾಗುವುದೆಂದು ಒಪ್ಪಂದವಾಗಿತ್ತು.

ಆದರೆ 20 ತಿಂಗಳು ಕಳೆದ ನಂತರ ಎಚ್ ಡಿ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ಒಪ್ಪದಿದ್ದ ಕಾರಣ ಬಿಜೆಪಿ ಮೈತ್ರಿಯಿಂದ ಹಿಂದೆ ಸರಿಯಿತು. ಇಡೀ ರಾಜ್ಯದಲ್ಲಿ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತವಾಯಿತು. ಮುಂದಿನ 2008ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಸಾಧಿಸಿ ಅಧಿಕಾರಕ್ಕೆ ಬಂತು. ಆದರೆ ಹಲವು ಆರೋಪಗಳು ಮತ್ತು ಪಕ್ಷದವರಿಂದಲೇ ರಾಜಕೀಯದಿಂದಾಗಿ ಯಡಿಯೂರಪ್ಪನವರಿಗೆ 5 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಮುಂದುವರಿಯಲು ಸಾಧ್ಯವಾಗಲಿಲ್ಲ. 2008ರಿಂದ 2013ರವರೆಗಿನ 13ನೇ ವಿಧಾನಸಭೆ ಅಧಿಕಾರಾವಧಿಯಲ್ಲಿ ಬಿಜೆಪಿಯಿಂದ ಮೂವರು ಮುಖ್ಯಮಂತ್ರಿಗಳಾದರು.

ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಕೀರ್ತಿ ಬಿ.ಎಸ್.ಯಡಿಯೂರಪ್ಪನವರದ್ದು. 2007ರ ನವೆಂಬರ್ 12ರಿಂದ 19ರವರೆಗೆ ಹಾಗೂ 2008ರ ಮೇ 30ರಿಂದ 2011 ಜುಲೈ 31ರವರೆಗೆ ಮುಖ್ಯಮಂತ್ರಿಯಾಗಿ ಅತ್ಯಂತ ಅಲ್ಪ ಕಾಲದವರೆಗೆ ಆಳ್ವಿಕೆ ನಡೆಸಿದ್ದರು.

2011ರಲ್ಲಿ ಕರ್ನಾಟಕ ಲೋಕಾಯುಕ್ತ ಅಕ್ರಮ ಗಣಿಗಾರಿಕೆ ಕೇಸಿನಲ್ಲಿ ಯಡಿಯೂರಪ್ಪನವರ ವಿರುದ್ಧ ಕೇಸು ದಾಖಲಿಸಿತ್ತು. ಯಡಿಯೂರಪ್ಪನವರು ಬೆಂಗಳೂರು ಮತ್ತು ಶಿವಮೊಗ್ಗದಲ್ಲಿ ಅಕ್ರಮ ಭೂ ವ್ಯವಹಾರ ನಡೆಸಿದ್ದಾರೆಮತ್ತು ಬಳ್ಳಾರಿ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಅಕ್ರಮವಾಗಿ ಕಲ್ಲಿದ್ದಲು ಗಣಿಯ ರಫ್ತಿನ ಹಗರಣ ಕೂಡ ಅವರ ವಿರುದ್ಧ ಕೇಳಿಬಂತು.

ಈ ಎಲ್ಲಾ ಆರೋಪಗಳ ಹಿನ್ನೆಲೆಯಲ್ಲಿ ಬಿಜೆಪಿ ಕೇಂದ್ರ ನಾಯಕರ ತೀವ್ರ ಒತ್ತಡದಿಂದ 2011 ಜುಲೈ 31ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿ 2012ರಲ್ಲಿ ಬಿಜೆಪಿ ಶಾಸಕ ಸ್ಥಾನಕ್ಕೆ ಮತ್ತು ಪ್ರಾಥಮಿಕ ಸದಸ್ಯತ್ವದಿಂದ ಕೂಡ ಹೊರಬಂದರು. ತಮ್ಮದೇ ಕರ್ನಾಟಕ ಜನತಾ ಪಕ್ಷ(ಕೆಜೆಪಿ)ಯನ್ನು ಹುಟ್ಟುಹಾಕಿದರು.

ಆದರೆ ಆ ಪಕ್ಷ ಗೆಲುವು ಕಾಣಲಿಲ್ಲ. 2013ರಲ್ಲಿ ಮತ್ತೆ ತಮ್ಮ ಮೂಲ ಬಿಜೆಪಿಗೆ ಸೇರಿಕೊಂಡರು. 2014ರ ಲೋಕಸಭೆ ಚುನಾವಣೆ ವೇಳೆಗೆ ಅವರ ಕೆಜೆಪಿ ಪಕ್ಷ ಬಿಜೆಪಿ ಜೊತೆ ಒಟ್ಟುಸೇರಿತು. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ 3,63305 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

2016ರಲ್ಲಿ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಯಡಿಯೂರಪ್ಪನವನ್ನು ಮರು ನೇಮಕ ಮಾಡಲಾಯಿತು. ಆ ಬಳಿಕ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಕೇಂದ್ರ ನಾಯಕರು ಘೋಷಿಸಿದರು.

ಈ ಬಾರಿ ಶಿಕಾರಿಪುರದಲ್ಲಿ ಸ್ಪರ್ಧಿಸಿದ ಯಡಿಯೂರಪ್ಪನವರು ಕಾಂಗ್ರೆಸ್ ನ ಗಾಣಿ ಮಾಲತೇಶ್ ಅವರನ್ನು 35,397 ಮತಗಳ ಅಂತರದಿಂದ ಸೋಲಿಸಿ 7ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಸರ್ಕಾರ ರಚಿಸಲು ಬೇಕಾದ 112 ಶಾಸಕರ ಕೊರತೆಯಿದ್ದರೂ ಕೂಡ ರಾಜ್ಯಪಾಲ ವಜುಭಾಯಿ ವಾಲಾ ಅವರು ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳಿಂದ ಗೆದ್ದ ಬಿಜೆಪಿಗೆ ಸರ್ಕಾರ ರಚಿಸಲು ಆಹ್ವಾನ ನೀಡಿದ್ದರಿಂದ ಬಿ.ಎಸ್.ಯಡಿಯೂರಪ್ಪ ಇಂದು ರಾಜ್ಯದ 23ನೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ವಿಶ್ವಾಸಮತ ಸಾಬೀತುಪಡಿಸಲು ಇನ್ನು 15 ದಿನಗಳ ಕಾಲಾವಕಾಶ ನೀಡಲಾಗಿದೆ.

Comments are closed.