ಕರ್ನಾಟಕ

ಕರ್ನಾಟಕದಲ್ಲಿ ಅರಳಿದ ಕಮಲ ! ಕಾಂಗ್ರೆಸ್ಸಿನ ಘಟಾನುಘಟಿಗಳಿಗೆ ಸೋಲು-ಮುಖಭಂಗ

Pinterest LinkedIn Tumblr

ಬೆಂಗಳೂರು: ವಿಧಾನಸಭಾ ಚುನಾವಣೆಯ ಮತಎಣಿಕೆ ಅಂತಿಮ ಹಂತದತ್ತ ತಲುಪುತ್ತಿರುವಂತೆ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮುವುದು ಖಚಿತವಾಗಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲು, ಬಾದಾಮಿಯಲ್ಲಿ ಜಯಗಳಿಸಿದ್ದಾರೆ. ಆದರೆ ಸಂಪುಟದ ಬಹುತೇಕ ಸಚಿವರು ಸೋಲನುಭವಿಸಿದ್ದಾರೆ.

ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಗೆಲುವನ್ನು ಸಾಧಿಸಿದ್ದಾರೆ. ವಿರೋಧಪಕ್ಷದ ನಾಯಕರಾದ ಈಶ್ವರಪ್ಪ ಶಿವಮೊಗ್ಗದಲ್ಲಿ ಗೆಲುವು ಸಾಧಿಸಿದ್ದು, ಜಗದೀಶ್‌ ಶೆಟ್ಟರ್‌ ಮುನ್ನಡೆಯಲ್ಲಿದ್ದಾರೆ.ಜೆಡಿಎಸ್‌ ರಾಜ್ಯ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಜಯಗಳಿಸಿದ್ದಾರೆ.

ವಿಧಾನಸಭೆ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ರಾಣೆಬೆನ್ನೂರು ಕ್ಷೇತ್ರದಲ್ಲಿ, ಕೆಪಿಜೆಪಿ ಅಭ್ಯರ್ಥಿ ಆರ್.ಶಂಕರ್ ವಿರುದ್ಧ ಸೋಲನುಭವಿಸಿದ್ದಾರೆ.

ಮಧ್ಯಾಹ್ನ 12 ಗಂಟೆಯ ಸಮಯದಲ್ಲಿ 222 ಕ್ಷೇತ್ರಗಳ ಪೈಕಿ 106 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್‌ 75 ಮತ್ತು ಜೆಡಿಎಸ್‌ 39 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಯಿರುವ ಪಕ್ಷೇತರರು ಎರಡು ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ. 224 ಬಲದ ವಿಧಾನಸಭೆಯಲ್ಲಿ ಸರಳ ಬಹುಮತ ಗಳಿಸಲು 113 ಸ್ಥಾನಗಳನ್ನು ಗೆಲ್ಲಬೇಕಾಗಿದೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಮೂರನೇ ಸುತ್ತಿನಿಂದ ಕಾಯ್ದುಕೊಂಡ ಮುನ್ನಡೆಯನ್ನು 14ನೇ ಸುತ್ತಿನವರೆಗೂ ಉಳಿಸಿಕೊಂಡಿದ್ದು, ಗೆಲುವು ಸಾಧಿಸಿದ್ದಾರೆ. ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಶ್ರೀರಾಮುಲು ಮೊಳಕಾಲ್ಮುರು ಕ್ಷೇತ್ರದಿಂದ ಜಯಗಳಿಸಿದ್ದು, ಬಾದಾಮಿಯಲ್ಲಿ ಸೋತಿದ್ದಾರೆ.

ಸಿದ್ದರಾಮಯ್ಯ, ಶ್ರೀರಾಮುಲು ಮತ್ತು ಕುಮಾರಸ್ವಾಮಿ ತಲಾ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದ್ದರು. ಇವರಲ್ಲಿ ಕುಮಾರಸ್ವಾಮಿ ಎರಡೂ ಕ್ಷೇತ್ರ ಗೆದ್ದರೆ, ಉಳಿದಿಬ್ಬರು ಒಂದೊಂದು ಕ್ಷೇತ್ರದಲ್ಲಿ ಗೆದ್ದಿದ್ದಾರೆ. .

ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ (ಹೊಳಲ್ಕೆರೆ), ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ (ತೇರದಾಳ), ಬಿ. ರಮಾನಾಥ ರೈ (ಬಂಟ್ವಾಳ), ಬಸವರಾಜಯ ರಾಯರಡ್ಡಿ (ಯಲಬುರ್ಗಾ), ವಿನಯ ಕುಲಕರ್ಣಿ (ಧಾರವಾಡ), ಸಂತೋಷ್ ಲಾಡ್‌ (ಕಲಘಟಗಿ), ಡಾ.ಶರಣಪ್ರಕಾಶ ಪಾಟೀಲ (ಸೇಡಂ), ರುದ್ರಪ್ಪ ಮಾನಪ್ಪ ಲಮಾಣಿ (ಹಾವೇರಿ), ಪ್ರಮೋದ್‌ ಮಧ್ವರಾಜ್‌ (ಉಡುಪಿ), ಎಂ.ಸಿ.ಮೋಹನ ಕುಮಾರಿ (ಗುಂಡ್ಲುಪೇಟೆ), ಎಸ್‌.ಎಸ್‌.ಮಲ್ಲಿಕಾರ್ಜನ (ದಾವಣಗೆರೆ ಉತ್ತರ), ಕಾಗೋಡು ತಿಮ್ಮಪ್ಪ (ಸಾಗರ) ಸೋತ ಸಚಿವರು.

ಎಚ್‌.ಸಿ.ಮಹದೇವಪ್ಪ (ಟಿ.ನರಸೀಪುರ), ಬ್ಯಾಟರಾಯನಪುರ ಕ್ಷೇತ್ರದಲ್ಲಿ ಕೃಷ್ಣ ಬೈರೇಗೌಡ ಹಿನ್ನಡೆಯಲ್ಲಿದ್ದಾರೆ.

ಸಚಿವರಾದ ಡಿ.ಕೆ.ಶಿವಕುಮಾರ್‌ (ಕನಕಪುರ) ಆರ್‌.ವಿ.ದೇಶಪಾಂಡೆ (ಹಳಿಯಾಳ), ತನ್ವೀರ್‌ ಸೇಠ್‌ (ನರಸಿಂಹರಾಜ), ರಮೇಶ್‌ ಕುಮಾರ್‌ (ಶ್ರೀನಿವಾಸಪುರ), ಕೆ.ಜೆ.ಜಾರ್ಜ್‌ (ಸರ್ವಜ್ಞನಗರ), ರಾಮಲಿಂಗಾ ರೆಡ್ಡಿ (ಬಿಟಿಎಂ ಲೇಔಟ್‌) ಜಯಗಳಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸೊರಬ ಕ್ಷೇತ್ರದಲ್ಲಿ ಮಾಜಿ ಸಚಿವ ಬಿಜೆಪಿಯ ಕುಮಾರ್‌ ಬಂಗಾರಪ್ಪ, ಜೆಡಿಎಸ್‌ ಅಭ್ಯರ್ಥಿ ಹಾಗೂ ಸೋದರ ಮಧು ಬಂಗಾರಪ್ಪ ವಿರುದ್ಧ ಜಯಗಳಿಸಿದ್ದಾರೆ.

Comments are closed.