ಕರ್ನಾಟಕ

ನಮ್ಮಲ್ಲಿ ಭಿನ್ನತೆಗಳನ್ನು ಸೃಷ್ಟಿಸುವ ಸಲುವಾಗಿ ಮಾಧ್ಯಮಗಳು ದಲಿತ ಮುಖ್ಯಮಂತ್ರಿ ವಿವಾದ ಹುಟ್ಟುಹಾಕುತ್ತಿವೆ: ಮಲ್ಲಿಕಾರ್ಜುನ ಖರ್ಗೆ

Pinterest LinkedIn Tumblr

ಬೆಂಗಳೂರು: ಭಿನ್ನತೆಗಳನ್ನು ಸೃಷ್ಟಿಸುವ ಸಲುವಾಗಿ ಮಾಧ್ಯಮಗಳು ದಲಿತ ಮುಖ್ಯಮಂತ್ರಿ ವಿವಾದ ಹುಟ್ಟುಹಾಕುತ್ತಿವೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಸೋಮವಾರ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ದಲಿತ ಮುಖ್ಯಮಂತ್ರಿ ವಿವಾದ ಹುಟ್ಟುಹಾಕಿರುವುದು ಮಾಧ್ಯಮಗಳೇ. ನಮ್ಮಲ್ಲಿ ಭಿನ್ನತೆಗಳನ್ನು ಸೃಷ್ಟಿಸುವ ಸಲುವಾಗಿ ವಿಚಾರವನ್ನು ಹುಟ್ಟುಹಾಕಲಾಗಿದೆ ಎಂದು ಹೇಳಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲವು ಸಾಧಿಸಿದ್ದೇ ಆದರೆ, ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರೆಂಬುದನ್ನು ಕಾಂಗ್ರೆಸ್ ಹೈ ಕಮಾಂಡ್ ನಿರ್ಧರಿಸಲಿದೆ. ಏನೇ ಇದ್ದರೂ ಎಲ್ಲವೂ ಇನ್ನು 12 ಗಂಟೆಗಳ ವಿಚಾರವಷ್ಟೇ. ಪಕ್ಷ ನಿರ್ದೇಶಿಸಿದ್ದೇ ಆಧರೆ, ದಲಿತ ಮುಖ್ಯಮಂತ್ರಿ ಸ್ಥಾನದಿಂದ ಹಿಂದುಳಿಯಲು ನಾನು ಸಿದ್ಧ ಎಂದು ತಿಳಿಸಿದ್ದಾರೆ.

ದೇಶದಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ರಾಜ್ಯ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಶನಿವಾರ ಮುಕ್ತಾಯಗೊಂಡಿತ್ತು. ಮತದಾನ ಪೂರ್ಣಗೊಂಡ ಹಿನ್ನಲೆಯಲ್ಲಿ ಹಲವು ಮಾಧ್ಯಮಗಳು ಚುನಾವಣೋತ್ತರ ಸಮೀಕ್ಷೆಗಳು ನಡೆಸಿದ್ದು, ಕುತೂಹಲಕಾರಿ ಫಲಿತಾಂಶಗಳ ಕುರಿತು ಸುದ್ದಿ ಪ್ರಕಟಿಸುತ್ತಿವೆ. ಚುನಾವಣೋತ್ತರ ಫಲಿತಾಂಶಗಳು ಕುರಿತು ರಾಜ್ಯದಲ್ಲಿ ಒಂದೆಡೆ ಚರ್ಚೆ ನಡೆಯುತ್ತಿದ್ದರೆ, ಮತ್ತೊಂದೆಡೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬಂದಿದ್ದೇ ಆದರೆ, ಉಪ ಮುಖ್ಯಮಂತ್ರಿ ಯಾರಾಗುತ್ತಾರೆಂಬುದರ ಕುರಿತೂ ಕೂಡ ಚರ್ಚೆಗಳು ಆರಂಭವಾಗಿವೆ.

ದಲಿತರೊಬ್ಬರು ಮುಖ್ಯಮಂತ್ರಿಯಾಗುವುದಾದರೆ ತಮಗೆ ಅಡ್ಡಿಯಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿರುವ ಹಿನ್ನಲೆಯಲ್ಲಿ ಚರ್ಚೆಗೆ ಕಾವು ದೊರೆತಂತಾಗಿದೆ.

ಸಿದ್ದರಾಮಯ್ಯ ಅವರ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್ ಹಿರಿಯ ದಲಿತ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಪರಮೇಶ್ವರ್ ಕೂಡ ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ್ದು, ಚರ್ಚೆಗೆ ಮತ್ತಷ್ಟು ಇಂಬು ನೀಡಿದಂತಾಗಿದೆ.

Comments are closed.