ಕರ್ನಾಟಕ

ಮತದಾರರಿಗೆ ಮತ ಹಾಕಲು ಹಣ: ಇದನ್ನು ದೇವರ ಹಣ ಹುಂಡಿಗೆ ಹಾಕಿದ ಗ್ರಾಮಸ್ಥರು!

Pinterest LinkedIn Tumblr


ಪಕ್ಷವೊಂದರ ಅಭ್ಯರ್ಥಿಯೊಬ್ಬರ ಪರ ಮತ ಹಾಕಲು ನೀಡಿದ ಹಣವನ್ನು ಗ್ರಾಮಸ್ಥರು ದೇವಾಲಯದ ಹುಂಡಿಗೆ ಹಾಕಿರುವ ಘಟನೆ ಮದ್ದೂರು ತಾಲೂಕಿನ ಆತಗೂರು ಹೋಬಳಿ ಮಲ್ಲನಕುಪ್ಪೆ ಗ್ರಾಮದಲ್ಲಿ ನಡೆದಿದೆ.

ಗ್ರಾಪಂ ಮಾಜಿ ಸದಸ್ಯರೊಬ್ಬರ ಕೈಗೆ ಪಕ್ಷದ ಮುಖಂಡರು 2.50 ಲಕ್ಷ ರೂ. ಹಣ ನೀಡಿದ್ದರು. ಆದರೆ, ಹಣ ಪಡೆದ ವ್ಯಕ್ತಿ 1 ಲಕ್ಷ ರೂ.ಗಳನ್ನು ತನ್ನಲ್ಲೇ ಇರಿಸಿಕೊಂಡು, ಉಳಿದ 1.50 ಲಕ್ಷ ರೂ.ಗಳನ್ನು ಮತದಾರರಿಗೆ ಹಂಚಲು ಕೊಟ್ಟಿದ್ದರು. ಇದರಿಂದ ಬೇಸರಗೊಂಡು ಗ್ರಾಮದ ಮುಖಂಡರು ಆ ಹಣವನ್ನು ಗ್ರಾಮದ ದೇವತೆ ಶ್ರೀ ದಂಡಿನ  ಮಾರಮ್ಮ ದೇವಾಲಯದ ಹುಂಡಿಗೆ ಹಾಕಿ ತಮಗೆ ಇಷ್ಟಬಂದ ಅಭ್ಯರ್ಥಿಗೆ ವೋಟು ಹಾಕುವಂತೆ ಹೇಳಿ ಅಲ್ಲಿಂದ ನಿರ್ಗಮಿಸಿದ್ದಾರೆ.

ಆಸ್ಪತ್ರೆಯಿಂದ ಬಂದು ಮತ ಚಲಾಯಿಸಿದರು
ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆಯೋರ್ವರು ಮತ ಚಲಾಯಿಸಲೇ ಬೇಕು ಎಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಅಲ್ಲಿನ ವೈದ್ಯರೇ ಆಕೆಯನ್ನು ಮತಗಟ್ಟೆಗೆ ಕರೆತಂದು, ಮತಹಾಕುವಂತೆ ಮಾಡಿ ವಾಪಸ್‌ ಕರೆದೊಯ್ದಿದ್ದಾರೆ.

80ರ ಹರೆಯದ ತೆಂಕನಿಡಿಯೂರಿನ ಸರೋಜಾ ಎಸ್‌. ರಾವ್‌ (80) ಅವರು ಅಸೌಖ್ಯದಿಂದಾಗಿ ಕೆಲವು ದಿನಗಳ ಹಿಂದೆ ಉಡುಪಿಯ ಗಾಂಧಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಮತದಾನ ಮಾಡಲೇ ಬೇಕೆಂದು ವೈದ್ಯರಲ್ಲಿ ನಿವೇದನೆಯನ್ನು ಮಾಡಿದ ಹಿನ್ನೆಲೆಯಲ್ಲಿ ಅಲ್ಲಿನ ವೈದ್ಯಾಧಿಕಾರಿಗಳು ಆ್ಯಂಬುಲೆನ್ಸ್‌ ಮೂಲಕ ತೆಂಕನಿಡಿಯೂರು ಗರಡಿಮಜಲು ಹಿ.ಪ್ರಾ. ಶಾಲೆಯ ಮತಗಟ್ಟೆಗೆ ಕರೆತಂದು ಮತದಾನವನ್ನು ಮಾಡಿಸಿ ಮತ್ತೆ ಆಸ್ಪತ್ರೆಗೆ ಸೇರಿದರು.

ಅಜ್ಜಿ ವಂಚಿಸಿದ ಮೊಮ್ಮಗನ ವಿರುದ್ಧ ಕೇಸ್‌
ಅಜ್ಜಿಯನ್ನು ವಂಚಿಸಿ ತನ್ನಿಷ್ಟ ಬಂದ ಅಭ್ಯರ್ಥಿಗೆ ಮತ ಚಲಾವಣೆ ಮಾಡಿದ್ದಲ್ಲದೆ, ಅದನ್ನು ಮೊಬೈಲ್‌ನಲ್ಲಿ ವಿಡಿಯೋ ತೆಗೆದು ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟ ಮೊಮ್ಮಗನ ವಿರುದ್ಧ ಮದ್ದೂರು ಚುನಾವಣಾಧಿಕಾರಿಗಳು ಪ್ರಕರಣ ದಾಖಲು ಮಾಡಿದ್ದಾರೆ. ತಾಲೂಕಿನ ಕಸಬಾ ಹೋಬಳಿ ಸಾದೊಳಲು ಗ್ರಾಮದ ಸಚಿನ್‌ ಎಂಬುವವನ ವಿರುದ್ಧ ಚುನಾವಣಾಧಿಕಾರಿ ಕೃಷ್ಣಪ್ಪ ನೀಡಿದ ದೂರಿನನ್ವಯ ಪೊಲೀಸರು ಕೇಸು ದಾಖಲು ಮಾಡಿಕೊಂಡಿದ್ದಾರೆ.

ಆರೋಪಿ ಸಚಿನ್‌ ಸಾದೊಳಲು ಗ್ರಾಮದ ತನ್ನ ಅಜ್ಜಿ ಲೇಟ್‌ ಮರಿಗೌಡರ ಪತ್ನಿ ಲಿಂಗಮ್ಮ (72)ಎಂಬುವವರ ಜೊತೆ ಗ್ರಾಮದ ಮತಗಟ್ಟೆ ಸಂಖ್ಯೆ 2ಕ್ಕೆ ಮತದಾನ ಮಾಡಲು ಕರೆತಂದಿದ್ದ. ಈ ವೇಳೆ ಅಜ್ಜಿ ಕಾಂಗ್ರೆಸ್‌ಗೆ ಮತ ಹಾಕುವಂತೆ ಹೇಳಿದ್ದಾಳೆ. ಅಜ್ಜಿಗೆ ಸಹಾಯ ಮಾಡುವ ನೆಪದಲ್ಲಿ ಮೊಮ್ಮಗ ಸಚಿನ್‌ ಜೆಡಿಎಸ್‌ ಅಭ್ಯರ್ಥಿಗೆ ಮತ ಚಲಾಯಿಸಿ ಮತದಾನ ಪ್ರಕ್ರಿಯೆಯಲ್ಲಿ ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹರಿಯಬಿಟ್ಟಿದ್ದಾನೆ.

ಬಿಕ್ಕಿ ಬಿಕ್ಕಿ ಅತ್ತ ಗರ್ಭಿಣಿ
ಮತದಾನಕ್ಕೆ ಅವಕಾಶ ನೀಡುವಂತೆ ಗರ್ಭಿಣಿಯೊಬ್ಬರು ಬಿಕ್ಕಿ ಬಿಕ್ಕಿಅತ್ತ ಘಟನೆ ಶನಿವಾರ ಬೆಂಗಳೂರಿನ ಬನಶಂಕರಿಯ ಬಿಎನ್‌ಎಂ ಕಾಲೇಜಿನ 142ರ ಮತಗಟ್ಟೆಯಲ್ಲಿ ನಡೆದಿದೆ. ಬನಶಂಕರಿಯ ಎರಡನೇ ಹಂತದಲ್ಲಿ ವಾಸವಾಗಿರುವ ಚೈತ್ರ ಅವರು ಬೆಳಗ್ಗೆ ಮತದಾನಕ್ಕೆ ಆಗಮಿಸಿದ್ದರು. ಆದರೆ, ಮೂಲ ಗುರುತಿನ ಚೀಟಿಯ ಬದಲಿಗೆ ನಕಲು ಗುರುತಿನ ಪ್ರತಿ ತಂದಿದ್ದರಿಂದ ಚುನಾವಣಾ ಸಿಬ್ಬಂದಿ ಮತದಾನಕ್ಕೆ ಅವಕಾಶ ನೀಡಿರಲಿಲ್ಲ. ಇದರಿಂದ ಬೇಸರಗೊಂಡ ಅಳಲು ಆರಂಭಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರ ಒತ್ತಾಯದ ಮೇರೆಗೆ ಮತದಾನಕ್ಕೆ ಅವಕಾಶ ನೀಡಲಾಯಿತು.

ಸಂಭ್ರಮದ ನಡುವೆ ಹಕ್ಕು ಚಲಾವಣೆ
ಧಾರವಾಡದ ಹೊಸ ಯಲ್ಲಾಪುರದ ನಗರೇಶ್ವರ ದೇವಸ್ಥಾನದಲ್ಲಿ ಗಂಗಾವತಿಯ ಜ್ಞಾನೇಶ್ವರ ಅವರನ್ನು ವರಿಸಿರುವ ಧಾರವಾಡದ ಯುವತಿ ಅರ್ಪಿತಾ ವಡವಡಗಿ, ಹಸೆ ಮಣೆ ಏರಿದ ಬಳಿಕ ನೇರವಾಗಿ ವಿದ್ಯಾರಣ್ಯ ಶಾಲೆಗೆ ಆಗಮಿಸಿ, ತಮ್ಮ ಹಕ್ಕು ಚಲಾಯಿಸಿದರು. ಇಲ್ಲಿನ ದೈವಜ್ಞ ಕಲ್ಯಾಣಮಂಟಪದಲ್ಲಿ ಕಾಮನಕಟ್ಟೆ ಬಡಾವಣೆಯ ಮಲ್ಲಿಕಾರ್ಜುನ ಗಾಮನಗಟ್ಟಿ ಅವರ ವಿವಾಹ ನಿಖೀತಾ ಅವರೊಂದಿಗೆ ನಡೆಯಿತು. ಅಕ್ಷತೆ ಬೀಳುತ್ತಿದ್ದಂತೆಯೇ ತಮ್ಮ ಪತ್ನಿಯೊಂದಿಗೆ ಕಮಲಾಪೂರದ ಮತಗಟ್ಟೆಗೆ ಆಗಮಿಸಿದ ಮಲ್ಲಿಕಾರ್ಜುನ ಮತ ಚಲಾಯಿಸಿದರು.

ಹೆಬ್ಬಳ್ಳಿ ಗ್ರಾಮದಲ್ಲಿ ವಿವಾಹವಾಗಿರುವ ಶಿವಾನಂದಸುಂಕದ ಹಾಗೂ ನಾಗರಾಜ ಸುಂಕದ ಸಹೋದರರು ಜೊತೆಗೆ ಆಗಮಿಸಿ ಮತ ಚಲಾಯಿಸಿದರು. ಬೆಳಗಾವಿಯ ಕಸಾಯಿ ಗಲ್ಲಿಯ ಮಾನಿನಿ ತಹಶೀಲ್ದಾರ ಎಂಬವರ ವಿವಾಹ ಶನಿವಾರ ಇತ್ತು. ಯಾದಗಿರಿಯ ಶಹಾಪುರದ ಕೋರೆ ಗಲ್ಲಿಯ ಯತೀನ ಅವರೊಂದಿಗೆ ಹಸೆಮಣೆ ಏರುವ ಮುನ್ನ ಬೆಳಗ್ಗೆಯೇ ಬಂದು ಮತ ಚಲಾಯಿಸಿದರು.ಅಲಂಕೃತಗೊಂಡಿದ್ದ ಮಾನಿನಿ ಮದುವೆ ಸೀರೆ ಉಟ್ಟು ಬಂದಿದ್ದು ಗಮನ ಸೆಳೆಯಿತು.

Comments are closed.