ಕರ್ನಾಟಕ

ಟರ್ಫ್‌ ಕ್ಲಬ್‌ 6 ಮಂದಿ ಗುಮಾಸ್ತರಿಗೆ ಮಾಸಿಕ 75 ಸಾವಿರ, 8 ಮಂದಿ ಖಾಯಂ ಮಾಲಿಗೆ 80 ಸಾವಿರ ವೇತನ

Pinterest LinkedIn Tumblr


ಬೆಂಗಳೂರು: ಪ್ರತಿ ತಿಂಗಳು 75-80 ಸಾವಿರ ವೇತನದ ಕೆಲಸ ಹುಡುಕುತ್ತಿದ್ದೀರಾ ? ಕೆಲಸವೂ ಸ್ವಲ್ಪ ಆರಾಮಾಗಿರಬೇಕಾ? ಹಾಗಿದ್ದಲ್ಲಿ ಬೆಂಗಳೂರು ಟರ್ಫ್‌ ಕ್ಲಬ್‌ಗೆ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿ.

ಇಲ್ಲಿ ಕೆಲಸ ಮಾಡುತ್ತಿರುವ 6 ಮಂದಿ ಗುಮಾಸ್ತರಿಗೆ ಮಾಸಿಕ 75 ಸಾವಿರ ರೂ, 8 ಮಂದಿ ಖಾಯಂ ಮಾಲಿ (ಹುಲ್ಲು ಕೊಯ್ಯುವವರು) ಮಾಸಿಕ 80 ಸಾವಿರ ರೂ. ವೇತನ ಪಡೆಯುತ್ತಿದ್ದಾರೆ. ಇನ್ನು ಪದವಿ ಪಡೆಯದ ಸ್ಟೆನೋಗ್ರಾಫರ್‌ ಮಾಸಿಕ 1.2 ಲಕ್ಷ ರೂ. ವೇತನ ಪಡೆಯುತ್ತಿದ್ದಾರೆ. ಟರ್ಫ್‌ ಕ್ಲಬ್‌ನಲ್ಲಿ ಕೆಲಸಕ್ಕಿರುವ ನೌಕರರಿಗೆ ನೀಡುತ್ತಿರುವ ವಾರ್ಷಿಕ 38 ಕೋಟಿ ರೂ.. ಇದರಿಂದಾಗಿಯೇ ಟರ್ಫ್‌ ಕ್ಲಬ್‌ ಆರ್ಥಿಕ ಸಂಕಷ್ಟ ಎದುರಿಸುವ ಪರಿಸ್ಥಿತಿ ಎದುರಾಗಿದೆ.

ಬೇಕಾಬಿಟ್ಟಿ ವೇತನ ಪಡೆಯುತ್ತಿರುವ ಗುಮಾಸ್ತರು ಹಾಗೂ ಮಾಲಿಗಳು ಈ ವರೆಗೆ ಕ್ಲಬ್‌ಗೆ ಶಿಕ್ಷಣ ಪ್ರಮಾಣ ಪತ್ರ, ವಯಸ್ಸಿಗೆ ಸಂಬಂಧಿಸಿದ ದಾಖಲಾತಿಗಳನ್ನು ಸಲ್ಲಿಸಿಲ್ಲ. ಕೆಲ ಮಾಲಿಗಳಿಗೆ 60 ವರ್ಷ ದಾಟಿದ್ದರೂ, ಇನ್ನೂ ಕೆಲಸ ಮಾಡುತ್ತಿದ್ದಾರೆ.

ಆರೋಗ್ಯವಂತರೂ ಅಲ್ಲ

ನೌಕರರಲ್ಲಿ ಅನೇಕರಿಗೆ ಆರೋಗ್ಯ ಪರಿಸ್ಥಿತಿ ಸರಿಯಲ್ಲ. ಕೆಲಸ ಮಾಡುವ ಸ್ಥಿತಿಯಲ್ಲೂ ಅವರಿಲ್ಲ.. ಆದರೂ ಹಾಜರಾತಿ ಪಡೆದು, ವೇತನ ಪಡೆಯುತ್ತಿದ್ದಾರೆ. ಕೆಲವರು ಪಾರ್ಶ್ವವಾಯುಗೆ ತುತ್ತಾಗಿದ್ದರೆ, ಇನ್ನು ಕೆಲವರಿಗೆ ಮೂತ್ರಪಿಂಡ ವೈಫಲ್ಯ, ಸಂಧಿವಾತದಿಂದ ಬಳಲುತ್ತಿದ್ದಾರೆ. ಆದಾಗ್ಯೂ ಹಾಜರಾತಿ ಪಡೆದು ಗರಿಷ್ಠ ವೇತನ ಪಡೆಯಲಾಗುತ್ತಿದೆ.

ಈ ಕುರಿತು ಟರ್ಫ್‌ ಕ್ಲಬ್‌ ಸಮಿತಿ ನಿಯಮಗಳನ್ನು ಬಿಗಿಗೊಳಿಸುತ್ತಿದ್ದು, ವಯಸ್ಸು ಸೇರಿ ಇತ್ಯಾದಿ ದಾಖಲೆಗಳ್ನು ಒದಗಿಸುವಂತೆ ತಿಳಿಸಲಾಗಿದೆ. ಅಲ್ಲದೆ ದೇಹದ ಆರೋಗ್ಯದ ಬಗ್ಗೆ ಪರೀಕ್ಷೆ ನಡೆಸಲು ವಿಕ್ಟೋರಿಯಾ ಆಸ್ಪತ್ರೆಗೆ ಕೆಲವರನ್ನು ಕಳುಹಿಸಲಾಗಿದೆ. ಕೂಡಲೇ ಕ್ರಮ ಕೈಗೊಳ್ಳುವುದು ಕಷ್ಟ. ಹೀಗಾಗಿ ಆಸ್ಪತ್ರೆಯಿಂದ ಬಂದ ವರದಿಯ ಅನುಸಾರ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವ ಪ್ರಸಾದ್‌ ಮಾಹಿತಿ ನೀಡಿದ್ದಾರೆ.

ಕ್ಲಬ್‌ನ ಈ ನಿರ್ಧಾರಕ್ಕೆ ನೌಕರರಿಂದ ವ್ಯಾಪಕ ವಿರೊಧವೂ ವ್ಯಕ್ತವಾಗಿದ್ದು, ಅಧಿಕಾರಿ ವರ್ಗವೂ ದೊಡ್ಡ ಮೊತ್ತದ ವೇತನ ಪಡೆಯುತ್ತಿದ್ದಾರೆ. ವೇತನ ಕಡಿತಗೊಳಿಸುವುದಾದರೆ ಅಧಿಕಾರಿಗಳಿಂದಲೇ ಆರಂಭವಾಗಬೇಕು ಎಂದು ನೌಕರರು ಆಗ್ರಹಿಸಿದ್ದಾರೆ.

“ಅನೇಕ ನೌಕರರಿಗೆ ಸ್ವಯಂ ನಿವೃತ್ತಿ ಪಡೆಯುವಂತೆ ಸಲಹೆ ನೀಡಲಾಗಿದ್ದರೂ, ಪ್ರಯೋಜನವಾಗಿಲ್ಲ. ಈ ಕುರಿತು ಕಾನೂನು ತಂಡದೊಂದಿಗೆ ಮುಂದಿನ ಹೆಜ್ಜೆ ಕುರಿತು ಚರ್ಚಿಸಲಾಗುತ್ತಿದೆ. ಕ್ಲಬ್‌ನ ಆರ್ಥಿಕ ಪರಿಸ್ಥಿತಿ ಸರಿದೂಗಿಸಲು, ಖರ್ಚು ಕಡಿಮೆ ಮಾಡುವ ವಿಧಾನಗಳನ್ನು ಅನುಸರಿಸಲಾಗುತ್ತದೆ.” -ಶಿವಪ್ರಸಾದ್‌, ಸಿಇಒ

Comments are closed.