ಕರ್ನಾಟಕ

ನಾವು ಪ್ರಚಂಡ ಬಹುಮತದಿಂದ ಗೆಲ್ಲುತ್ತೇವೆ : ಅಮಿತ್ ಶಾ ವಿಶ್ವಾಸ

Pinterest LinkedIn Tumblr

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ನಾವು ಪ್ರಚಂಡ ಬಹುಮತದಿಂದ ಗೆಲ್ಲುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ರಾಜ್ಯ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರ ಇಂದಿಗೆ ಮುಕ್ತಾಯವಾದ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಮಿತ್ ಶಾ, ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾತಾವರಣವಿದೆ, ಬಾದಾಮಿ ಹಾಗೂ ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ಮುಖವಾಡ ಕಳಚಿದೆ. ವೋಟರ್ ಐಡಿ ಪ್ರಕರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಬಂಧನವಾಗಿದೆ ಎಂದರು.

ಇನ್ನು ಈ ಪ್ರಕರಣವನ್ನು ಬಿಜೆಪಿ ಮೇಲೆ ಹಾಕಲು ಕಾಂಗ್ರೆಸ್ ಮುಂದಾಗಿತ್ತು. ಆದರೆ ಕೊನೆಗೆ ಸತ್ಯ ಹೊರಬಂದಿದೆ. ಚುನಾವಣೆ ಗೆಲ್ಲಲು ಕಾಂಗ್ರೆಸ್ ಎಸ್ಡಿಪಿಐ ಜತೆ ಒಪ್ಪಂದ ಆಗಿರೋದು ಜಗಜ್ಜಾಹೀರಾಗಿದೆ. ಜನತೆಯ ಮುಂದೆ ಸಿದ್ದರಾಮಯ್ಯ ಮುಖವಾಡ ಬಯಲಾಗಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಟಿಪ್ಪು ಜಯಂತಿ ಮಾಡುತ್ತಾರೆ. ಆದರೆ ಕನ್ನಡದ ಶ್ರೇಷ್ಠ ವ್ಯಕ್ತಿಗಳ ಜಯಂತಿ ಮಾಡಲು ಕಾಂಗ್ರೆಸ್ ಗೆ ನೆನಪಿಲ್ಲ. ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಜನಾಕ್ರೋಶವಿದೆ. ರಾಜ್ಯದಲ್ಲಿ 3,500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಾಸಕನ ಮಗ ಗೂಂಡಾಗಿರಿ ಮಾಡಿದರೂ ಎಫ್ಐಆರ್ ಆಗಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿ 130 ಸ್ಥಾನಗಳನ್ನು ಗೆಲ್ಲಲ್ಲಿದ್ದು ಜೆಡಿಎಸ್ ಜತೆ ಸರ್ಕಾರ ರಚಿಸುವ ಅನಿವಾರ್ಯತೆ ಬಿಜೆಪಿಗೆ ಬರುವುದಿಲ್ಲ. ಇನ್ನು ಬಿಎಸ್ ಯಡಿಯೂರಪ್ಪ ಪೂರ್ಣಾವಧಿ ಮುಖ್ಯಮಂತ್ರಿಯಾಗಿ 5 ವರ್ಷ ಅಧಿಕಾರ ಪೂರೈಸಲಿದ್ದಾರೆ ಎಂದರು.

ಮಾಜಿ ಸಚಿವ ಜನಾರ್ದನ ರೆಡ್ಡಿ ಪರ ತೀರ್ಪಿಗಾಗಿ ಶ್ರೀರಾಮುಲು ಡೀಲ್ ಕುದುರಿಸಿರುವ ವಿಡಿಯೋ ಬಹಿರಂಗ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅಮಿತ್ ಶಾ ಚುನಾವಣೆ ವೇಳೆ ಈ ರೀತಿಯ ವಿಡಿಯೋ ಬಿಡುಗಡೆ ಸಾಮಾನ್ಯ, ಬಹಳಷ್ಟು ಸ್ಟಿಂಗ್ ಬರುತ್ತವೆ. ಅವೆಲ್ಲವನ್ನೂ ನಂಬಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Comments are closed.