ಕರ್ನಾಟಕ

ಸುಪ್ರೀಂ ಕೋರ್ಟಿನ ನಿವೃತ್ತ ಸಿಜೆಐ ಕೆಜಿ ಬಾಲಕೃಷ್ಣನ್ ಗೆ ಶ್ರೀರಾಮುಲು 150 ಕೋಟಿ ಲಂಚ ನೀಡಿರುವ ವಿಡಿಯೋ ವೈರಲ್: ತನಿಖೆಗೆ ಕಾಂಗ್ರೆಸ್ ಆಗ್ರಹ

Pinterest LinkedIn Tumblr

ಬೆಂಗಳೂರು: ದೇಶಾದ್ಯಂತ ತೀವ್ರ ಕುತೂಹಲ ಮೂಡಿಸಿರುವ ರಾಜ್ಯ ವಿಧಾನಸಭೆ ಚುನಾವಣೆಗೆ ಕೆಲವೇ ಗಂಟೆಗಳು ಬಾಕಿ ಇದ್ದು, ಬಿಜೆಪಿ ನಾಯಕ ಶ್ರೀರಾಮುಲು ಅವರು ತಮ್ಮ ಆಪ್ತ ಸ್ನೇಹಿತ, ಮಾಜಿ ಸಚಿವ ಗಾಲಿ ಜನಾರ್ದನ್ ರೆಡ್ಡಿ ಒಡೆತನದ ಓಬಳಾಪುರಂ ಮೈನಿಂಗ್ ಕಂಪನಿ ಉಳಿಸಿಕೊಳ್ಳಲು ಸುಪ್ರೀಂ ಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ಕೆಜಿ ಬಾಲಕೃಷ್ಣನ್ ಅವರ ಜತೆ ಡೀಲ್ ಮಾಡುವ ವಿಡಿಯೋ ಈಗ ವೈರಲ್ ಆಗಿದೆ.

ಪ್ರಾದೇಶಿಕ ಸುದ್ದಿ ವಾಹಿನಿಯಲ್ಲಿ ಪ್ರಸಾರವಾದ ಈ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿದ ಕಾಂಗ್ರೆಸ್, ಈ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಒತ್ತಾಯಿಸಿದೆ.

ಬಾದಾಮಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸ್ಪರ್ಧಿಸಿರುವ ಶ್ರೀರಾಮುಲು ಅಂದಿನ ಸಿಜೆಐಗೆ ಲಂಚ ನೀಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಮೈನಿಂಗ ಕಂಪನಿ ಉಳಿಸಿಕೊಳ್ಳಲು ಅಂದು ಸಚಿವರಾಗಿದ್ದ ಶ್ರೀರಾಮುಲು ಸಿಜೆಐ ಬಾಲಕೃಷ್ಣ ಅವರ ಅಳಿಯ ಶ್ರೀನಿಜನ್, ಸ್ವಾಮೀಜಿ, ಹಾಗು ಮಧ್ಯವರ್ತಿ ಕುಬಾಳನ್ ಮಾತುಕತೆ ನಡೆಸಿರುವುದು ವಿಡಿಯೋದಲ್ಲಿ ಬಹಿರಂಗವಾಗಿದೆ. ಹೈಕೋರ್ಟ್ ತೀರ್ಪು ಎತ್ತಿಹಿಡಿಯಲು ಒಟ್ಟು 150 ಕೋಟಿಗೆ ಡೀಲ್ ಮಾಡಿಕೊಂಡಿದ್ದಾರೆ. ಆದರೆ 100 ಕೋಟಿ ನೀಡಿ, ಇನ್ನು 50 ಕೋಟಿ ರುಪಾಯಿ ನೀಡಲು ಶ್ರೀರಾಮುಲು ನಿರಾಕರಿಸಿದ ನಂತರ ಈ ಸ್ಟಿಂಗ್ ಆಪರೇಷನ್ ನಡೆಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಓಬಳಾಪುರಂ ಮೈನಿಂಗ್ ಪ್ರಕರಣದಲ್ಲಿ ತೀರ್ಪು ತಮ್ಮ ಪರವಾಗಿ ಬರುವಂತೆ ಮಾಡಲು ಶ್ರೀರಾಮುಲು ಮತ್ತು ಮಧ್ಯವರ್ತಿ ಕ್ಯಾಪ್ಟನ್ ರೆಡ್ಡಿ, ಬಾಲಕೃಷ್ಣನ್ ಅಳಿಯ ಶ್ರೀನಿಜನ್‌ ಡೀಲ್ ನಡೆಸಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ.

ಈ ಡೀಲ್ ಬಗ್ಗೆ ದೊಡ್ಡ ಮಟ್ಟದ ತನಿಖೆ ನಡೆಯಬೇಕು, ಭ್ರಷ್ಟಾಚಾರ ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದು ಗುಂಡೂರಾವ್‌ ಆಗ್ರಹಿಸಿದ್ದಾರೆ.

ಈ ವಿಡಿಯೋ ಬಿಜೆಪಿಯವರ ಭ್ರಷ್ಟಾಚಾರದ ಮುಖವಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಭ್ರಷ್ಟಾಚಾರಿಗಳನ್ನು ರಕ್ಷಣೆ ಮಾಡುತ್ತಿದ್ದಾರೆ. ಸಿಬಿಐನಿಂದ ಆರೋಪಿಗಳನ್ನು ಖುಲಾಸೆ ಮಾಡಿಸುತ್ತಿದ್ದಾರೆ. ಸುಪ್ರೀಂ ಜಡ್ಜ್ ಗಳೇ ಬೀದಿಗೆ ಬಂದು ಅಸಮಾಧಾನ ವ್ಯಕ್ತಪಡಿಸುವ ಸ್ಥಿತಿ ಎದುರಾಗಿದೆ ಎಂದು ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

ಇನ್ನು ಕಾಂಗ್ರೆಸ್ ಆರೋಪವನ್ನು ಅಮಿತ್ ಶಾ ಸ್ಪಷ್ಟವಾಗಿ ತಳ್ಳಿಹಾಕಿದ್ದು, ಅದು ನಕಲಿ ವಿಡಿಯೋ. ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ಕರೆ ನೀಡಿದ್ದಾರೆ.

Comments are closed.