ಕರ್ನಾಟಕ

ಇಂದಿರಾ ಕ್ಯಾಂಟೀನ್‌ನಿಂದ ಬಿಬಿಎಂಪಿಗೆ ಸಿಕ್ತು 400 ಕೋಟಿ ಮೌಲ್ಯದ ಭೂಮಿ

Pinterest LinkedIn Tumblr


ಬೆಂಗಳೂರು: ಇಂದಿರಾ ಕ್ಯಾಂಟೀನ್ ನಿರ್ಮಾಣದಿಂದ ಬಿಬಿಎಂಪಿಗೆ 400 ಕೋಟಿ ರೂ. ಲಾಭವಾಗಿದೆ. ಆದರೆ, ಇಂದಿರಾ ಕ್ಯಾಂಟೀನ್ ನಿರ್ಮಾಣ ವಿಚಾರದಲ್ಲಿ ಬಿಬಿಎಂಪಿ ವಿರುದ್ಧ ಕೋರ್ಟ್‌ಗೆ ಹೋಗಿದ್ದ ವ್ಯಕ್ತಿ 4 ಎಕರೆ ಭೂಮಿಯನ್ನು ಕಳೆದುಕೊಂಡಿದ್ದಾನೆ.

ಬೆಂಗಳೂರಿನ ಎಚ್‌.ಎಸ್‌.ಆರ್‌.ಲೇಔಟ್ ಬಳಿಯ ತನ್ನ ಭೂಮಿಯನ್ನು ಬಿಬಿಎಂಪಿ ಒತ್ತುವರಿ ಮಾಡಿಕೊಂಡಿದೆ ಎಂದು ಮನೋಹರ್ ರಾಜು ಎಂಬ ವ್ಯಕ್ತಿಯೊಬ್ಬ ಕೋರ್ಟ್‌ ಮೊರೆ ಹೋಗಿದ್ದ. ಆದರೆ, ಆ ಭೂಮಿ ಅವರಿಗೆ ಸೇರಿದೆ ಎಂದು ಸರಿಯಾದ ದಾಖಲೆಗಳು ಇಲ್ಲ ಎಂದು ಭೂಮಿ ಒತ್ತುವರಿ ವಿರೋಧಿ ವಿಶೇಷ ಕೋರ್ಟ್‌ ಮಧ್ಯಂತರ ಆದೇಶ ನೀಡಿದೆ.

ಎಚ್ಎಸ್‌ಆರ್ ಕೋರ್ಟ್ ಬಳಿಯ ಮಂಗಮ್ಮನಪಾಳ್ಯದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಿದ್ದ ಬಿಬಿಎಂಪಿ ಮೇ ಮೊದಲ ವಾರದಲ್ಲಿ ಉದ್ಘಾಟನೆಗೆ ಮುಂದಾಗಿತ್ತು. ಆದರೆ, ಈ ಜಾಗದ ಬಳಿಯ 3 ಎಕರೆ ಭೂಮಿಯನ್ನು ಹೊಂದಿದ್ದ ಮನೋಹರ್ ರಾಜು, ಬಿಬಿಎಂಪಿ ಇಂದಿರಾ ಕ್ಯಾಂಟೀನ್‌ಗೆ ಅಂತ ತನ್ನ ಮತ್ತೊಂದು ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದೆ ಎಂದು ಕೋರ್ಟ್‌ ಮೊರೆ ಹೋಗಿದ್ದ. ಆದರೆ, ಕೋರ್ಟ್‌ನಲ್ಲಿ ವಿಚಾರಣೆ ನಡೆಯುವ ವೇಳೆ ತಿಳಿದುಬಂದಿದ್ದೇನೆಂದರೆ, ಇಂದಿರಾ ಕ್ಯಾಂಟೀನ್ ಜಾಗ ಹಾಗೂ ರಾಜು ಹೆಸರಿನಲ್ಲಿದ್ದ 3 ಎಕರೆ ಜಾಗ ಸಹ ಪಾಲಿಕೆಗೆ ಸೇರಿದ್ದು ಎಂಬುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಈ ಜಾಗವನ್ನು ಮರು ವಶಪಡಿಸಿಕೊಳ್ಳಲು ಬಿಬಿಎಂಪಿ ಮುಂದಾಗಿದೆ.

ಬೊಮ್ಮನಹಳ್ಳಿ ವಲಯದ ಯೆಲ್ಲನಕುಂಟೆ ಗ್ರಾಮಕ್ಕೆ ಸೇರಿದ ಈ 4 ಎಕರೆ ಭೂಮಿಯ ಬೆಲೆ ಸುಮಾರು 400 ಕೋಟಿ ರೂ. ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ. ಅಲ್ಲದೆ, ಈ ಜಾಗದಲ್ಲಿ ಸರಕಾರಿ ಆಸ್ಪತ್ರೆ, ಸಾರ್ವಜನಿಕ ಪಾರ್ಕ್, ಶಾಲೆ ಕಟ್ಟಿಸಬೇಕೆಂದು ಬಿಬಿಎಂಪಿಗೆ ಮನವಿ ಮಾಡುತ್ತೇವೆಂದು ಹೇಳಿದ್ದಾರೆ. ಹಾಗೂ, 400 ಕೋಟಿಗೆ ಸೇರಿದ ಭೂಮಿ ಜತೆಗೆ ಆರೋಪಿ 20 ಲಕ್ಷ ರೂ ಬಾಡಿಗೆ ಪಡೆಯುತ್ತಿದ್ದರು. ಈ ಸಂಬಂಧ ನಾವು ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೆವು ಎಂದೂ ಸ್ಥಳೀಯರಾದ ರಾಘವೇಂದ್ರ ಹೇಳಿದ್ದಾರೆ.

ಆದರೆ, ಈ ಸಂಬಂಧ ಪ್ರತಿಕ್ರಿಯೆ ನೀಡಿದ ರಾಜು ಪುತ್ರ ಸ್ವರೂಪ್‌, ಇದು ಕೇವಲ ಮಧ್ಯಂತರ ಆದೇಶವಾಗಿದೆ. ಕೇವಲ ಇಂದಿರಾ ಕ್ಯಾಂಟೀನ್ ಉದ್ಘಾಟನೆಗಿದ್ದ ತಡೆಯಾಜ್ಞೆ ನಿವಾರಣೆಯಾಗಿದೆ. ಈ ತೀರ್ಪಿನ ವಿರುದ್ಧ ನಾವು ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಹೋಗುತ್ತೇವೆ. ಈ ತೀರ್ಪನ್ನು ನಾವು ಒಪ್ಪುವುದಿಲ್ಲ ಎಂದು ತಿಳಿಸಿದ್ದಾರೆ.

Comments are closed.