ಕರ್ನಾಟಕ

ಪತ್ನಿ ಹತ್ಯೆ ಯತ್ನ ಕಂಡ ಮಲಮಗನನ್ನು ಅಟ್ಟಾಡಿಸಿ ಕೊಂದ

Pinterest LinkedIn Tumblr


ಬೆಂಗಳೂರು: ಪತ್ನಿ ಹತ್ಯೆ ಯತ್ನ ನೋಡಿದ ಮಗನನ್ನು ಮಲ ತಂದೆ ಅಟ್ಟಾಡಿಸಿಕೊಂಡು ಕೊಂದ ಅಮಾನವೀಯ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಗುರುವಾರ ಬೆಳಕಿಗೆ ಬಂದಿದೆ.

ಆರೋಪಿಯನ್ನು ಹೊಸಕೋಟೆ ಬಳಿಯ ಅತ್ತಿವಟ್ಟಾ ಗ್ರಾಮದ ನಿವಾಸಿಯಾದ ರಾಮಮೂರ್ತಿ ಡಿ (28) ಎಂದು ಗುರುತಿಸಲಾಗಿದೆ.ಮರುಮದುವೆಗೆ ಅಡ್ಡಿಯಾಗಿದ್ದ ಪತ್ನಿ ಜ್ಯೋತಿಯನ್ನು ಕೊಲ್ಲುವ ಯತ್ನದಲ್ಲಿದ್ದಾಗ ಆಕೆಯ ಮಗ ಗೌತಮ್ ( 9) ಅದನ್ನು ನೋಡಿದ್ದ. ಹೀಗಾಗಿ ಸತ್ಯ ಹೊರಬೀಳಬಹುದೆಂಬ ಭೀತಿಯಿಂದ ರಾಮಮೂರ್ತಿ ಆತನನ್ನು ಕೊಂದಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದ್ದು ವಿಚಾರಣೆಗೆ ಒಳಪಡಿಸಲಾಗಿದೆ.

ಘಟನೆಯ ವಿವರ:

ರಾಮಮೂರ್ತಿ ಇ- ಕಾಮರ್ಸ್ ಸಂಸ್ಥೆಯೊಂದರ ಉದ್ಯೋಗಿಯಾಗಿದ್ದು, ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಜ್ಯೋತಿ ಎಂಬಾಕೆಯನ್ನು ನಾಲ್ಕು ವರ್ಷ ಪ್ರೀತಿಸಿ ಕಳೆದ ವರ್ಷ ಮದುವೆಯಾಗಿದ್ದ. ಜ್ಯೋತಿಗೆ ಇದು ಎರಡನೆಯ ಮದುವೆಯಾಗಿದ್ದು ಮೊದಲ ಪತಿ ಕಿರಣ್‌ನಿಂದ ಆಕೆಗೆ ಗೌತಮ್ ( ಮೃತ) ಎಂಬ 9 ವರ್ಷದ ಮಗನಿದ್ದ. ರಾಮಮೂರ್ತಿ ಮದುವೆಯಾಗಿರುವ ಬಗ್ಗೆ ಆತನ ತಂದೆ-ತಾಯಿಗಳಿಗೆ ಅರಿವಿರಲಿಲ್ಲವಾದ್ದರಿಂದ ಆತನಿಗೆ ಮತ್ತೆ ಮದುವೆ ಮಾಡುವ ತಯಾರಿ ನಡೆಸಿದ್ದರು. ಈ ಕುರಿತು ರಾಮಮೂರ್ತಿ ಪತ್ನಿ ಜ್ಯೋತಿ ಬಳಿ ಹೇಳಿದ್ದು, ಮೊದ ಮೊದಲು ತಂದೆ-ತಾಯಿಗಳ ಮನಸ್ಸಿಗೆ ಬೇಸರವನ್ನುಂಟು ಮಾಡಬೇಡಿ, ಮದುವೆಯಾಗಿ ಎಂದಾಕೆ ಹೇಳಿದ್ದಳು ಎಂದು ತಿಳಿದು ಬಂದಿದೆ.

ಆದರೆ ಕೆಲ ಸಮಯದ ನಂತರ ಜ್ಯೋತಿ ಗಂಡನ ಮರುಮದುವೆಗೆ ನಿರಾಕರಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ರಾಮಮೂರ್ತಿ ಆಕೆಯನ್ನು ಮುಗಿಸಲೇ ಬೇಕೆಂದು ನಿರ್ಧರಿಸಿದ್ದಾನೆ. ಅದರಂತೆ ಯೋಜನೆ ರೂಪಿಸಿ ಏಪ್ರೀಲ್ 20 ರಂದು ಹೊಸಕೋಟೆಯಿಂದ 10 ಕೀಮಿ ದೂರದಲ್ಲಿರುವ ರಾಮೇಶ್ವರ ದೇವಸ್ಥಾನಕ್ಕೆ ಕರೆದೊಯ್ದಿದ್ದಾನೆ. ಮುಂಜಾನೆ 5 ಗಂಟೆಗೆ ದೇವಸ್ಥಾನಕ್ಕೆ ತಲುಪಿದ ಕುಟುಂಬ ಸ್ವಲ್ಪ ಹೊತ್ತು ಜತೆಗೆ ಸಮಯ ಕಳೆದಿದೆ. ಬಳಿಕ ತಿಂಡಿ ತರುತ್ತೇನೆ, ನೀವು ಇಲ್ಲ ಮಲಗಿರಿ ಎಂದ ರಾಮಮೂರ್ತಿ ಕೆಲ ದೂರಕ್ಕೆ ಹೋಗಿ ಹಿಂತಿರುಗಿ ಬಂದಿದ್ದಾನೆ. ಪತ್ನಿ ಮತ್ತು ಮಲ ಮಗ ನಿದ್ದೆಗೆ ಜಾರಿರುವುದನ್ನು ಖಾತ್ರಿ ಪಡಿಸಿಕೊಂಡು ದೊಡ್ಡ ಕಲ್ಲೊಂದನ್ನು ತೆಗೆದುಕೊಂಡು ಜ್ಯೋತಿ ತಲೆಗೆ ಅಪ್ಪಳಿಸಿದ್ದಾನೆ. ಅಷ್ಟರಲ್ಲಿ ಎಚ್ಚರಗೊಂಡ ಗೌತಮ್ ಆ ಭೀಕರ ದೃಶ್ಯವನ್ನು ನೋಡಿ, ಭಯಗೊಂಡು ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದ್ದಾನೆ. ಆದರೆ ಆತನ ಬೆನ್ನಟ್ಟಿದ ರಾಮಮೂರ್ತಿ ಅದೇ ಕಲ್ಲಿನಿಂದ ತಲೆಗೆ ಹೊಡೆದು ಕೊಂದಿದ್ದಾನೆ. ಬಳಿಕ ಶವವನ್ನು ಪೊದೆಯೊಂದರಲ್ಲಿ ಬೀಸಾಡಿ ದೇವಸ್ಥಾನಕ್ಕೆ ಮರಳಿದ್ದಾನೆ.

ಅಲ್ಲಿ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ಜ್ಯೋತಿ ಸಾವನ್ನಪ್ಪಿದ್ದಾಳೆ ಎಂದುಕೊಂಡ ಆತ ಅಲ್ಲಿಂದ ಪರಾರಿಯಾಗಿದ್ದಾನೆ. ಸ್ವಲ್ಪ ಹೊತ್ತಿನ ಬಳಿಕ ಎಚ್ಚೆತ್ತ ಜ್ಯೋತಿ ಸಹಾಯಕ್ಕಾಗಿ ಕೂಗಿಕೊಂಡಿದ್ದಾಳೆ. ಸ್ಥಳೀಯರು ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆದರೆ ರಾಮಮೂರ್ತಿಯನ್ನು ಅಪಾರವಾಗಿ ನಂಬಿದ್ದ ಜ್ಯೋತಿ ತನ್ನ ಮೊದಲ ಪತಿ ಕಿರಣ್ ತನ್ನನ್ನು ಕೊಲ್ಲಲು ಯತ್ನಿಸಿರಬಹುದೆಂದು ಪೊಲೀಸರ ಬಳಿ ಹೇಳಿದ್ದಾಳೆ. ಆದರೆ ಈ ಪ್ರಕರಣದಲ್ಲಿ ಕಿರಣ್ ತಪ್ಪಿಲ್ಲದಿರುವುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಮೊಬೈಲ್ ನೆಟ್‌ವರ್ಕ್ ಜಾಡು ಹಿಡಿದು ರಾಮಮೂರ್ತಿಯನ್ನು ಬಂಧಿಸಿ ವಿಚಾರಿಸಿದಾಗ ಆತನೇ ಆರೋಪಿ ಎಂಬುದು ಬೆಳಕಿಗೆ ಬಂದಿದೆ. ಆತನ ತಪ್ಪೊಪ್ಪಿಗೆ ಆಧಾರದ ಮೇಲೆ ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿದ್ದ ಗೌತಮ್ ದೇಹವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಜ್ಯೋತಿ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ರಾಮಮೂರ್ತಿಯನ್ನು ಶುಕ್ರವಾರ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

Comments are closed.