ಕರ್ನಾಟಕ

ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಕೆ: ಮುಳಬಾಗಿಲು ಕಾಂಗ್ರೆಸ್‌ ಅಭ್ಯರ್ಥಿ ಮಂಜುನಾಥ್‌ ನಾಮಪತ್ರ ತಿರಸ್ಕೃತ

Pinterest LinkedIn Tumblr

ಮುಳಬಾಗಿಲು: ಕೋಲಾರ ಜಿಲ್ಲೆ ಮುಳಬಾಗಿಲು ಕ್ಷೇತ್ರ ಕಾಂಗ್ರೆಸ್‌ ಅಭ್ಯರ್ಥಿ ಕೊತ್ತೂರು ಜಿ.ಮಂಜುನಾಥ್‌ ನಕಲಿ ಜಾತಿ ಪ್ರಮಾಣ ಪತ್ರ ನೀಡಿದ್ದ ಹಿನ್ನೆಲೆಯಲ್ಲಿ ಅವರ ನಾಮಪತ್ರ ತಿರಸ್ಕೃತಗೊಂಡಿದೆ.

ಮಂಜುನಾಥ್‌ ಅವರ ನಾಮಪತ್ರವನ್ನು ಅಸಿಂಧುಗೊಳಿಸಿ ಚುನಾವಣಾ ಆಯೋಗ ಆದೇಶಿಸಿದ್ದು ಇದರಿಂದ ಮತದಾನಕ್ಕೆ ಮುನ್ನವೇ ಕಾಂಗ್ರೆಸ್ ಗೆ ತೀವ್ರ ಹಿನ್ನಡೆಯಾಗಿದೆ.

2013ರ ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿದ್ದ ಜಾತಿ ಪ್ರಮಾಣಪತ್ರ ನಕಲೆಂದು ಆರೋಪಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಇದೇ ಬುಧವಾರ ತೀರ್ಪು ನೀಡಿ ಅವರ ಜಾತಿ ಪ್ರಮಾಣಪತ್ರವನ್ನು ಅಸಿಂಧುಗೊಳಿಸಿ ಆದೇಶಿಸಿತ್ತು.

ನ್ಯಾಯಾಲಯದ ಆದೇಶ ಪ್ರತಿ ದೊರೆತ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಕಾಂಗ್ರೆಸ್ ಅಭ್ಯರ್ಥಿಯ್ತ ನಾಮಪತ್ರವನ್ನು ತಿರಸ್ಕರಿಸಿದೆ.

“ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಾಮಪತ್ರ ಅಂಗೀಕಾರದ ನಿರ್ಣಯವನ್ನು ಗುರುವಾರಕ್ಕೆ ಕಾಯ್ದಿರಿಸಲಾಗಿತ್ತು. ನಾಮಪತ್ರ ಪರಿಶೀಲನೆ ವೇಳೆ ಅಭ್ಯರ್ಥಿ ಹಾಜರಿರಬೇಕೆಂದು ಹೇಳಲಾಗಿತ್ತು. ಕಾಂಗ್ರೆಸ್‌ ಅಭ್ಯರ್ಥಿ ಮಂಜುನಾಥ್‌ ಅವರಿಗೆ ಈ ಸಂಬಂಧ ನೋಟೀಸ್ ಜಾರಿಯಾಗಿತ್ತು. ಆದರೆ ಗುರುವಾರ ಸಂಜೆಯೊಳಗೆ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್‌ನಿಂದ ತಡೆಯಾಜ್ಞೆ ತರುತ್ತೇನೆಂದು ಹೇಳಿ ತೆರಳಿದ್ದಾರೆ. ಆದರೆ ನಿಯಮಾನುಸಾರ ಅಭ್ಯರ್ಥಿಗೆ ಈ ಬಗೆಯ ಸಮಯ ನೀಡಲು ಆಯೋಗಕ್ಕೆ ಯಾವ ಅವಕಾಶವೂ ಇಲ್ಲ. ಹೀಗಾಗಿ ಅವರ ನಾಮಪತ್ರ ತಿರಸ್ಕರಿಸಲಾಗಿದೆ ” ಚುನಾವಣಾಧಿಕಾರಿ ರಾಚಪ್ಪಹೇಳಿದ್ದಾರೆ.

Comments are closed.