ಕರ್ನಾಟಕ

ವರುಣಾದಲ್ಲಿ ಬಿವೈ ವಿಜಯೇಂದ್ರ ಬದಲಿಗೆ ಟಿ ಬಸವರಾಜುಗೆ ಬಿಜೆಪಿ ಬಿಫಾರಂ; ಬಾದಾಮಿಯಲ್ಲಿ ಶ್ರೀರಾಮುಲು ನಾಮಪತ್ರ ಸಲ್ಲಿಕೆ!

Pinterest LinkedIn Tumblr

ಮೈಸೂರು: ಬಿಜೆಪಿಯಲ್ಲಿ ದಿಢೀರ್ ಗೊಂದಲಕ್ಕೆ ಕಾರಣವಾಗಿದ್ದ ವರುಣಾ ಕ್ಷೇತ್ರದ ಅಭ್ಯರ್ಥಿ ಸಮಸ್ಯೆ ಕೊನೆಗೂ ಇತ್ಯರ್ಥವಾಗಿದ್ದು, ಬಿವೈ ವಿಜಯೇಂದ್ರ ಬದಲಿಗೆ ಟಿ ಬಸವರಾಜುಗೆ ಬಿಜೆಪಿ ಬಿಫಾರಂ ನೀಡಿದೆ. ಅತ್ತ ಬಾದಾಮಿಯಲ್ಲಿ ಸಂಸದ ಶ್ರೀರಾಮುಲು ತಮ್ಮನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಈ ಹಿಂದೆ ನಿಗದಿಯಾದಂತೆ ವರುಣಾ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ವಿರುದ್ಧ ಬಿಎಸ್ ವೈ ಪುತ್ರ ಬಿವೈ ರಾಘವೇಂದ್ರ ಸ್ಪರ್ಧೆ ಅಂತಿಮ ಎಂದೇ ಭಾವಿಸಲಾಗಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಅಂತಿಮ ಕ್ಷಣದಲ್ಲಿ ಬಿಜೆಪಿ ಬಿವೈ ರಾಘವೇಂದ್ರ ಅವರಿಗೆ ಟಿಕೆಟ್ ನಿರಾಕರಿಸಿದೆ. ಈ ಬಗ್ಗೆ ಸ್ವತ- ಯಡಿಯೂರಪ್ಪ ಅವರೇ ಸ್ಪಷ್ಟನೆ ನೀಡಿದ್ದು, ತಮ್ಮ ಪುತ್ರ ವರುಣಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿಲ್ಲ ಎಂದು ತಿಳಿಸಿದ್ದರು. ಅದರಂತೆ ಇದೀಗ ವರುಣಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಟಿ ಬಸವರಾಜು ಅವರಿಗೆ ಟಿಕೆಟ್ ನೀಡಲಾಗಿದ್ದು, ಸಂಜೆಯೊಳಗೆ ಅವರು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಬಿಜೆಪಿ ಮುಖಂಡ ಶಿವಣ್ಣ ಅವರು ಬಸವರಾಜು ಅವರಿಗೆ ಬಿಫಾರಂ ರವಾನೆ ಮಾಡಿದ್ದಾರೆ ಎನ್ನಲಾಗಿದೆ.

ಬಾದಾಮಿಯಲ್ಲಿ ಶ್ರೀರಾಮುಲು ನಾಮಪತ್ರ ಸಲ್ಲಿಕೆ
ಮತ್ತೊಂದೆಡೆ ತೀವ್ರ ಕುತೂಹಲ ಕೆರಳಿಸಿರುವ ಬಾದಾಮಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಚಿವ ಶ್ರೀರಾಮುಲು ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಬಿಜೆಪಿ ರಾಜ್ಯ ಉಸ್ತುವಾರಿ ಪ್ರಕಾಶ್​ ಜಾವಡೇಕರ್​, ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಅವರೊಂದಿಗೆ ಬಾದಾಮಿಗೆ ಆಗಮಿಸಿದ ರಾಮುಲು, ಮೊದಲಿಗೆ ಮಾರುತೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ನಂತರ ಬಾದಾಮಿಯ ಪ್ರಸಿದ್ಧ ಬನಶಂಕರಿ ದೇವಿ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಅಲ್ಲಿಂದ ನೇರವಾಗಿ ನಾಯಕರೊಂದಿಗೆ ತಾಲೂಕು ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಅತ್ತ ಬಾಗೇಪಲ್ಲಿಯಲ್ಲೂ ಬಿಜೆಪಿ ಅಭ್ಯರ್ಥಿಯಾಗಿ ನಟ ಸಾಯಿಕುಮಾರ್ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇಂದು ತಮ್ಮ ಸಾವಿರಾರು ಬೆಂಬಲಿಗರೊಂದಿಗೆ ತೆರಳಿ ನಟ ಸಾಯಿಕುಮಾರ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Comments are closed.