ಕರ್ನಾಟಕ

ಕಾಗೋಡು ಗ್ರೀನ್‌ ಸಿಗ್ನಲ್‌: ಬೇಳೂರು ಕಾಂಗ್ರೆಸ್‌ ಸೇರ್ಪಡೆ ಖಚಿತ

Pinterest LinkedIn Tumblr


ಬೆಂಗಳೂರು: ಸಾಗರ ಕ್ಷೇತ್ರದ ಬಿಜೆಪಿ ಟಿಕೆಟ್‌ ಕೈತಪ್ಪಿದ ಬಳಿಕ ಬಿಜೆಪಿ ಮತ್ತು ಹರತಾಳು ಹಾಲಪ್ಪ ಅವರ ವಿರುದ್ಧ ಸಮರ ಸಾರಿರುವ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ರಾಜಕೀಯ ಭವಿಷ್ಯದ ದೃಷ್ಟಿಯಿಂದ ಕಾಂಗ್ರೆಸ್‌ ಸೇರುವುದು ಖಚಿತವಾದಂತಿದೆ.

ಗೋಪಾಲಕೃಷ್ಣ ಅವರು ಶನಿವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್‌ ಅವರ ಮಲ್ಲೇಶ್ವರಂ ನಿವಾಸಕ್ಕೆ ಆಗಮಿಸಿ ಪಕ್ಷ ಸೇರ್ಪಡೆ ಕುರಿತು ಮಹತ್ವದ ಮಾತುಕತೆ ನಡೆಸಿದರು ಬಳಿಕ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್‌ ಅವರೊಂದಿಗೂ ಮಾತುಕತೆ ನಡೆಸಿ ಪಕ್ಷ ಸೇರ್ಪಡೆಗೆ ಒಪ್ಪಿಗೆ ಪಡೆದರು.

ಸಾಗರದ ಅಭ್ಯರ್ಥಿಯಾಗಿರುವ ಸಚಿವ ಕಾಗೋಡು ತಿಮ್ಮಪ್ಪ ಅವರು ಬೇಳೂರು ಗೋಪಾಲಕೃಷ್ಣ ಪಕ್ಷಕ್ಕೆ ಬರುವುದಾದರೆ ಬರಲಿ ಎಂದಿರುವುದಾಗಿ ತಿಳಿದು ಬಂದಿದೆ.

ಹಾಲಪ್ಪ ಅವರನ್ನು ಸೋಲಿಸುವ ಉದ್ದೇಶದಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದ ಅವರು ಈಗ ಕಾಂಗ್ರೆಸ್‌ ಅಭ್ಯರ್ಥಿ ಕಾಗೋಡು ತಿಮ್ಮಪ್ಪ ಅವರಿಗೆ ಬೆಂಬಲ ನೀಡಿದ್ದಾರೆ.

ಭವಿಷ್ಯದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗುವ ಮಹತ್ವಾಕಾಂಕ್ಷೆಯೊಂದಿಗೆ ಬೇಳೂರು ಗೋಪಾಲಕೃಷ್ಣ ಅವರು ಬೆಂಬಲಿಗರೊಂದಿಗೆ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಲು ಮುಂದಾಗಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ನಾಳೆ ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದೇನೆ. ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದ ಕಾಗೋಡು ಅವರಿಗೆ ಬೆಂಬಲ ನೀಡುತ್ತಿದ್ದೇನೆ’ ಎಂದು ಬೇಳೂರು ಗೋಪಾಲಕೃಷ್ಣ ಅವರು ಹೇಳಿದ್ದಾರೆ.

-ಉದಯವಾಣಿ

Comments are closed.