ಕರ್ನಾಟಕ

ಕೊಪ್ಪಳದಲ್ಲಿ ಬೆಂಕಿಗಾಹುತಿಯಾದ ಖಾಸಗಿ ಬಸ್‌; ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿತು ಭಾರೀ ಅನಾಹುತ

Pinterest LinkedIn Tumblr

ಕೊಪ್ಪಳ: ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 50 ಲ್ಲಿ ಖಾಸಗಿ ಬಸ್‌ ಬೆಂಕಿಗಾಹುತಿಯಾಗಿದೆ. ಶನಿವಾರ ಬೆಳ್ಳಂಬೆಳಿಗ್ಗೆ ಭಾರೀ ದುರಂತವೊಂದು ಚಾಲಕನ ಸಮಯಪ್ರಜ್ಞೆಯಿಂದ ಅದೃಷ್ಟವಶಾತ್ ತಪ್ಪಿದೆ.

ಖಾಸಗಿ ಬಸ್ ವೊಂದು ಬೆಂಗಳೂರಿನಿಂದ ವಿಜಯಪುರಕ್ಕೆ ತೆರಳುತ್ತಿತ್ತು. ಯಲಬುರ್ಗಾ ತಾಲೂಗಿನ ಗುನ್ನಾಳ್ ಬಳಿಯ ರಾಷ್ಟ್ರೀಯ ಹೆದ್ದಾರಿ 50ರ ಚತುಷ್ಪಥ ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ಗುನ್ನಾಳ್ ಕ್ರಾಸ್ ಬಳಿ ಬಸ್ ನಲ್ಲಿದ್ದ ಬ್ಯಾಟರಿಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಈ ವೇಳೆ ಇದ್ದಕ್ಕಿದ್ದಂತೆ ಬಸ್ ನಲ್ಲಿ ಬೆಂಕಿ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಬಸ್ ನಲ್ಲಿದ್ದ 32 ಮಂದಿ ಪ್ರಯಾಣಿಕರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇಂದು ಬೆಳಗಿನ ಜಾವ 5.30ರ ವೇಳೆಗೆ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಚಾಲಕ ಕೂಡಲೇ ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಸುವಂತೆ ಸೂಚಿಸಿದ್ದಾರೆ. ಸೂಚನೆಯಂತೆಯೇ ಪ್ರಯಾಣಿಕರು ಲಗೇಜ್ ಸಮೇತ ಕೆಳಗೆ ಇಳಿದಿದ್ದಾರೆ, ಕೆಲವೇ ನಿಮಿಷಗಳಲ್ಲಿ ಬೆಂಕಿ ಬಸ್ ಸುತ್ತಲೂ ಆವರಿಸಿ, ಹೊತ್ತಿಉರಿದಿದೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಬಸ್ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಬೇವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.