ಕರ್ನಾಟಕ

ಹನುಮಂತನ ಮೂರ್ತಿ ಸಾಗಣೆ, ಅಡ್ಡಿಯಾದ ರೈಲ್ವೆ ಸೇತುವೆ

Pinterest LinkedIn Tumblr


ಬೆಂಗಳೂರು: ನಗರದ ಕಾಚರಕನಹಳ್ಳಿಯಲ್ಲಿರುವ ರಾಮಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಲು ಕೋಲಾರದಿಂದ ದೊಡ್ಡ ಲಾರಿಯಲ್ಲಿ ತರಲಾಗುತ್ತಿರುವ 62 ಅಡಿ ಎತ್ತರದ ಹನುಮಂತನ ವಿಗ್ರಹ ಕೊತ್ತನೂರು ಬಳಿಯ ಗೆದ್ದಲಹಳ್ಳಿ ರೈಲ್ವೆ ಸೇತುವೆ ಬಳಿ ಸ್ಥಗಿತವಾಗಿದೆ.

ವಿಗ್ರಹ ಸಾಗಿಸುತ್ತಿರುವ ಲಾರಿ ರೈಲ್ವೆ ಸೇತುವೆ ಕೆಳಭಾಗದಲ್ಲಿ ಸಾಗಬೇಕಿದೆ. ಆದರೆ, ಎತ್ತರ ಹೆಚ್ಚಿರುವ ಕಾರಣ ಲಾರಿಯ ಹೈಡ್ರಾಲಿಕ್‌ ವ್ಯವಸ್ಥೆಯ ಬಳಸಿ ಎತ್ತರ ಕಡಿಮೆಗೊಳಿಸಿ ನಂತರ ಸಾಗಿಸಲಾಗುತ್ತದೆ. ತಂತ್ರಜ್ಞರು ಬಂದ ನಂತರ ಲಾರಿಯ ಎತ್ತರವನ್ನು ಕಡಿಮೆ ಮಾಡಿಕೊಂಡು ಸಾಗಿಸಬೇಕಾಗಿದೆ. ಟ್ರಾಫಿಕ್‌ ಇಲ್ಲದ ಸಮಯದಲ್ಲೇ ಅದನ್ನು ಸೇತುವೆ ಕೆಳಗೆ ಹೋಗಲು ಅವಕಾಶ ನೀಡಲಾಗುತ್ತದೆ ಎಂದು ಬಾಣಸವಾಡಿ ಸಂಚಾರ ಪೊಲೀಸ್‌ ಠಾಣೆಯ ಅಧಿಕಾರಿ ತಿಳಿಸಿದರು.

ಕೋಲಾರ ಜಿಲ್ಲೆ ನರಸಾಪುರ ಸಮೀಪದ ಬೈರಪುರದಲ್ಲಿ ಕೆತ್ತನೆಯಾಗಿರುವ ಸುಮಾರು 750 ಟನ್‌ ಹನುಮಾನ್‌ ಮೂರ್ತಿಯನ್ನು ಕಾಚರಕನಹಳ್ಳಿಗೆ ತರಲಾಗುತ್ತಿದೆ.

ನಗರ ವ್ಯಾಪ್ತಿಯಲ್ಲಿ ರಸ್ತೆ ಹಾಳಾಗದಂತೆ ಸಾಗಿಸಬೇಕು. ಒಂದು ವೇಳೆ ರಸ್ತೆ ಜಖಂಗೊಂಡರೆ ಅದಕ್ಕೆ ನೀವೇ ಹೊಣೆಯಾಗಬೇಕು ಎಂದು ಬಿಬಿಎಂಪಿ ಅಧಿಕಾರಿಗಳು ವಿಗ್ರಹ ಸಾಗಿಸುತ್ತಿರುವ ಕಾಚರಕನಹಳ್ಳಿಯ ಶ್ರೀರಾಮಚೈತನ್ಯ ಟ್ರಸ್ಟ್‌ನ ಟ್ರಸ್ಟಿ ಮುನಿರಾಜು ಅವರಿಗೆ ಸೂಚನೆ ನೀಡಿದ್ದರು. ಇದಕ್ಕೆ ಒಪ್ಪಿದ್ದ ಟ್ರಸ್ಟಿ, ವಿಗ್ರಹವನ್ನು ಕಾಚರಕನಹಳ್ಳಿಗೆ ಸಾಗಿಸುತ್ತಿದ್ದಾರೆ. ನಗರ ವ್ಯಾಪ್ತಿಯಲ್ಲಿ ದಿನಕ್ಕೆ ಮೂರು ಕಿ.ಮೀ ದೂರ ಸಂಚರಿಸುತ್ತಿರುವ ಬೃಹತ್‌ ಲಾರಿಯು, ಶುಕ್ರವಾರ ರಾತ್ರಿ ಗೆದ್ದಲಹಳ್ಳಿ ರೈಲ್ವೆ ಸೇತುವೆ ಬಳಿ ನಿಂತುಕೊಂಡಿದೆ. ರೈಲ್ವೆ ಸೇತುವೆಯಿಂದ ಕಾಚರಕನಹಳ್ಳಿಯಲ್ಲಿರುವ ರಾಮ ಮಂದಿರವೂ ಸುಮಾರು 6 ಕಿ.ಮೀ ದೂರದಲ್ಲಿದೆ. ಹೀಗಾಗಿ, ರೈಲ್ವೆ ಸೇತುವೆಯಿಂದ ಹೊರ ಬಂದರೆ, ಎರಡು ದಿನಗಳಲ್ಲಿ ವಿಗ್ರಹವೂ ನಿಗದಿತ ಸ್ಥಳ ತಲುಪಬಹುದು ಎಂದು ಅಂದಾಜಿಸಲಾಗಿದೆ. ಅಪೂರ್ಣಗೊಂಡಿರುವ ಹನುಮಂತನ ವಿಗ್ರಹವನ್ನು ನಿಗದಿತ ಸ್ಥಳ ತಲುಪಿದ ಬಳಿಕ ಶಿಲ್ಪಿಗಳು ಮತ್ತೆ ಕೆತ್ತನೆ ಮಾಡಿ ಅಂತಿಮ ಸ್ವರೂಪ ನೀಡಲಿದ್ದಾರೆ.

Comments are closed.