ಕರ್ನಾಟಕ

ನೀಲಿ ಚಿತ್ರದಲ್ಲಿ ನಟಿಸಿದ್ದೀಯಾ ಎಂದು ಪತ್ನಿಗೆ ಕಿರುಕುಳ

Pinterest LinkedIn Tumblr


ಬೆಂಗಳೂರು: ನೀಲಿ ಚಿತ್ರದಲ್ಲಿರುವ ನಾಯಕಿಯಾಗಿ ನಟಿಸಿದ್ದೀಯಾ ಎಂದು ಹೇಳಿ ನನ್ನ ಪತಿ ಚಿತ್ರಹಿಂಸೆ ನೀಡುತ್ತಿದ್ದಾರೆ. ಅವರಿಗೆ ಬುದ್ಧಿ ಹೇಳಿ ನನ್ನ ಜತೆ ಸಂಸಾರ ನಡೆಸಲು ಹೇಳಿ ಎಂದು ಒತ್ತಾಯಿಸಿ ಎಂದು ಚನ್ನಪಟ್ಟಣದ ಸ್ಥಳೀಯ ರಾಜಕೀಯ ಮುಖಂಡರೊಬ್ಬರ ಮೊದಲ ಪತ್ನಿ ಜ್ಞಾನಭಾರತಿ ಠಾಣೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಕಾಂತರಾಜ್‌ ಎಂಬುವರ ವಿರುದ್ಧ ಅವರ ಪತ್ನಿ ಪೊಲೀಸರ ಮೊರೆ ಹೋಗಿದ್ದಾರೆ. ”20 ವರ್ಷಗಳ ಹಿಂದೆ ನಾವು ಪ್ರೀತಿಸಿ ಮದುವೆಯಾಗಿದ್ದೆವು. ನಮ್ಮಿಬ್ಬರ ಜಾತಿ ಬೇರೆ ಆಗಿರುವ ಕಾರಣದಿಂದ ನನ್ನನ್ನು ಬೆಂಗಳೂರಿನಲ್ಲಿ ಮನೆ ಮಾಡಿ ಇರಿಸಿದ್ದಾರೆ. ಅಲ್ಲದೆ, ಚನ್ನಪಟ್ಟಣದಲ್ಲೊಂದು ಮದುವೆ ಮಾಡಿಕೊಂಡು ಅಲ್ಲೇ ವಾಸವಿದ್ದಾರೆ,” ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

”ನಮಗೆ ಇಬ್ಬರು ಮಕ್ಕಳಿದ್ದಾರೆ. ಕಾಂತರಾಜ್‌ ಆಗಾಗ ಮನೆಗೆ ಬಂದು ಹೋಗುತ್ತಿದ್ದರು. ಹಲವು ವರ್ಷ ನನ್ನ ಜತೆ ಚೆನ್ನಾಗಿಯೇ ಇದ್ದರು. ಈಗ ಅವರಿಗೆ ಸಿಕ್ಕಿರುವ ಬ್ಲೂಫಿಲಂನಲ್ಲಿ ನನ್ನ ಹಾಗೇ ಕಾಣುವ ಮಹಿಳೆ ಇದ್ದಾರೆ. ಅದನ್ನೇ ನೆಪ ಮಾಡಿಕೊಂಡು ನನ್ನಿಂದ ದೂರ ಆಗಲು ಅವರು ಯತ್ನಿಸುತ್ತಿದ್ದಾರೆ. ಈ ಬಗ್ಗೆ ಕೇಸು ದಾಖಲಿಸುವುದು ಬೇಡ. ಅವರನ್ನು ಕರೆಸಿ ಬುದ್ಧಿ ಹೇಳಿ, ನನ್ನ ಜತೆಯೂ ಸಂಸಾರ ಮಾಡುವಂತೆ ತಿಳಿಹೇಳಿ,” ಎಂದು ಅವರು ಮನವಿಯಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.

”ಮಹಿಳೆ ನೀಡಿದ ಅರ್ಜಿಯನ್ನು ಸ್ವೀಕರಿಸಲಾಗಿದೆ. ಅವರ ಮನವಿಯಂತೆ ಕೇಸು ದಾಖಲಿಸಿಲ್ಲ,” ಎಂದು ಜ್ಞಾನಭಾರತಿ ಠಾಣೆ ಪೊಲೀಸರು ತಿಳಿಸಿದ್ದಾರೆ.

Comments are closed.