ಬೆಂಗಳೂರು: ಪ್ರಚಾರದ ಕಳೆ ಹೆಚ್ಚಿಸಲು, ಜನರನ್ನು ಆಕರ್ಷಿಸಲು ಬಳಸುವ ಪ್ರಚಾರ ಸಾಮಗ್ರಿಗಳ ಮಾರಾಟಕ್ಕೆ ಈಗ ಸುಗ್ಗಿ ಕಾಲ. ನಾಲ್ಕೈದು ವಾರಗಳಲ್ಲಿ ವಹಿವಾಟು ನೂರಾರು ಕೋಟಿ ರೂ. ಮೀರುವ ನಿರೀಕ್ಷೆ ಇದೆ. ಜತೆಗೆ ನಿಷೇಧಿತ ಪ್ಲಾಸ್ಟಿಕ್ ಬಳಸಿದ ಬಂಟಿಂಗ್‌ಗಳನ್ನು ರಾಜಕೀಯ ಪಕ್ಷಗಳೇ ಬಳಸಿ ನಿಯಮ ಉಲ್ಲಂಘನೆಯೂ ಎಗ್ಗಿಲ್ಲದೇ ಸಾಗುತ್ತದೆ!
ರಾಜಧಾನಿಯಲ್ಲಿ ಪ್ರಚಾರ ಸಾಮಗ್ರಿಗಳ ಮಾರಾಟ ಭರಾಟೆ ಜೋರಾಗಿದ್ದು, ಪ್ರಮುಖ ಹತ್ತು ಮಳಿಗೆಗಳಲ್ಲಿ ಮುಂದಿನ ದಿನದಲ್ಲಿ ತಲಾ ಹತ್ತಾರು ಕೋಟಿ ರೂ. ವಹಿವಾಟು ನಡೆಯುವ ನಿರೀಕ್ಷೆ ಇದೆ. ಪ್ರಚಾರ ಸಾಮಗ್ರಿಗಳು ಸ್ಥಳೀಯವಾಗಿ ತಯಾರಾಗುವುದಕ್ಕಿಂತ ಮುಂಬೈ, ಗುಜರಾತ್, ಬನಾರಸ್ ಇತರೆ ಭಾಗ ಗಳಿಂದ ಪೂರೈಕೆಯಾಗುವುದೇ ಹೆಚ್ಚು. ಚುನಾವಣೆ ರಾಜ್ಯಕ್ಕೆ ಸೀಮಿತವಾದರೂ ಪ್ರಚಾರ ಸಾಮಗ್ರಿ ವಹಿವಾಟು ಗಡಿ ಮೀರಿದೆ.
ಜನರನ್ನು ಸಂಪರ್ಕಿಸಲು, ಮಾಹಿತಿ ರವಾನಿಸಲು ಸಾಮಾಜಿಕ ಜಾಲತಾಣ ಬಳಕೆ ಇದ್ದಾಗ್ಯೂ, ವಾರ್ಡ್, ಕ್ಷೇತ್ರವಾರು ಸಭೆ, ಸಮಾರಂಭ, ಬಹಿರಂಗ ಸಭೆ, ಸಮಾವೇಶ, ಬೀದಿಬದಿ ಸಭೆ, ಜಾಥಾ, ಯಾತ್ರೆಗಳು, ಪಾದಯಾತ್ರೆಗಳಿಗೆ ಸಾರ್ವಜನಿಕರನ್ನು ಸೆಳೆ ಯಲು ಕಾರ್ಯಕ್ರಮದ ಕಳೆ ಹೆಚ್ಚಿಸಲು ದೊಡ್ಡ ಪ್ರಮಾಣದಲ್ಲಿ ಬ್ಯಾನರ್, ಬಂಟಿಂಗ್ಸ್, ಪಕ್ಷದ ಬಾವುಟ ಅಳವಡಿಸುವುದು ಮಾತ್ರ ತಗ್ಗಿಲ್ಲ.
ನೂರಾರು ಕೋಟಿ ರೂ. ವಹಿವಾಟು!: ರಾಜ ಧಾನಿ ಬೆಂಗಳೂರಿನಲ್ಲಿ ಸಗಟು ದರದಲ್ಲಿ ಪ್ರಚಾರ ಸಾಮಗ್ರಿ ಮಾರಾಟ ಮಾಡುವ ಪ್ರಮುಖ ವಾದ 10ಕ್ಕೂ ಹೆಚ್ಚು ಮಳಿಗೆಗಳಿವೆ. ಲಾಲ್‌ಬಾಗ್ ಪಶ್ಚಿಮ ದ್ವಾರ ಬಳಿಯ ಆರ್. ವಿ.ರಸ್ತೆ, ಬಸವನಗುಡಿ, ಕಾಟನ್‌ಪೇಟೆ, ಗೂಡ್ಸ್ ಶೆಡ್ ರಸ್ತೆ, ಅವೆನ್ಯೂ ರಸ್ತೆ, ಶೇಷಾದ್ರಿಪುರ, ಚಂದ್ರಾ ಲೇಔಟ್ ಇತರೆಡೆ ಮಳಿಗೆಗಳಿವೆ. ಚುನಾ ವಣೆಯಿಲ್ಲದ ವರ್ಷಗಳಲ್ಲಿ ವಾರ್ಷಿಕ 1ರಿಂದ 2 ಕೋಟಿ ರೂ.ವರೆಗೆ ವಹಿವಾಟು ನಡೆ ಯುತ್ತದೆ. ಆದರೆ ಮುಂದಿನ 45 ದಿನಗಳಲ್ಲಿ ಭಾರಿ ವಹಿವಾಟು ನಡೆಯಲಿದ್ದು ಮೊತ್ತ 100 ಕೋಟಿ ರೂ. ಮೀರುವ ನಿರೀಕ್ಷೆ ಇದೆ.
ನಾಯಕರ ಚಿತ್ರಕ್ಕೆ ಬೇಡಿಕೆ: ಈ ಬಾರಿ ಮೋದಿ, ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಭಾವಚಿತ್ರವುಳ್ಳ ಟೋಪಿ ಹಾಗೂ ಟೀಶರ್ಟ್‌ಗಳು ಹೆಚ್ಚು ಮುದ್ರಣ ಗೊಂಡು ಸಿದ್ಧವಾಗುತ್ತಿವೆ. ಪಕ್ಷಗಳು ಅಭ್ಯರ್ಥಿಗಿಂತ ವರ್ಚಸ್ವಿ ನಾಯಕರ ಹೆಸರು, ಭಾವಚಿತ್ರವುಳ್ಳ ಟೋಪಿ ಮತ್ತು ಟೀ ಶರ್ಟ್‌ಗಳಿಗೆ ಒತ್ತು ನೀಡಿವೆ.
ಪ್ಲಾಸ್ಟಿಕ್ ಅಕ್ರಮ ಬಳಕೆ: ಪ್ಲಾಸ್ಟಿಕ್ ನಿಷೇಧವಿದ್ದರೂ ಬಂಟಿಂಗ್‌ಗಳಿಗೆ ಪ್ಲಾಸ್ಟಿಕ್ ಬಳಸಲಾಗುತ್ತಿದೆ. ಅವು ಕ್ರಮೇಣ ತುಂಡಾಗಿ ಗಾಳಿಯಲ್ಲಿ ಹಾರಿ ಚರಂಡಿ ಸೇರುತ್ತವೆ. ಹಲವೆಡೆ ಕಸದೊಂದಿಗೆ ಸೇರಿ ಜಾನುವಾರುಗಳ ಹೊಟ್ಟೆ ಸೇರಿದ ಉದಾಹರಣೆಗಳಿವೆ. ವಿಷಕಾರಕ ಪ್ಲಾಸ್ಟಿಕ್ ಬಳಸಿದ ಬಂಟಿಂಗ್‌ಗಳನ್ನೇ ರಾಜಕೀಯ ಪಕ್ಷಗಳು ಬಳಸುತ್ತಿರುವುದು ವಿಪರ್ಯಾಸ. ಪ್ಲಾಸ್ಟಿಕ್ ಬದಲಿಗೆ ಕಾಗದದ ಬಂಟಿಂಗ್ ಇದ್ದರೂ ಬಳಸುವವರೇ ಇಲ್ಲದಂತಾಗಿದೆ.
ವಹಿವಾಟಿನ ಪಕ್ಕಾ ಲೆಕ್ಕಾ ಇಲ್ಲ: ಪಕ್ಷಗಳ ಪ್ರಚಾರ ಸಾಮಗ್ರಿ ಮಾರಾಟ ಭರ್ಜರಿಯಾಗಿದ್ದರೂ ಲೆಕ್ಕಾ ಮಾತ್ರ ಪಕ್ಕಾ ಇರುವುದಿಲ್ಲ. ಅಂದರೆ ವ್ಯವಹಾರ ಮೊತ್ತದ ಶೇ.5ರಿಂದ ಶೇ.10ರಷ್ಟು ಮೊತ್ತಕ್ಕಷ್ಟೇ ಜಿಎಸ್‌ಟಿ ಸೇರಿದಂತೆ ರಿಸೀದಿ ನೀಡಿ ಉಳಿದ ಮೊತ್ತಕ್ಕೆ ಜಿಎಸ್‌ಟಿ ವಿಧಿಸದೆ ವ್ಯವಹರಿಸುತ್ತಾರೆ. ಈ ವ್ಯವಹಾರದಲ್ಲಿ ಉತ್ತರ ಭಾರತ ಮೂಲದವರೇ ಹೆಚ್ಚಾಗಿದ್ದಾರೆ ಎಂದು ರಾಜಕೀಯ ಮುಖಂಡರೊಬ್ಬರು ತಿಳಿಸಿದರು.
ಪ್ರಚಾರ ಸಾಮಗ್ರಿ ತಯಾರಿ ಗೆ ಆಯೋಗ ನಿಯಮ ಹೇರಿದೆ. ಅದಕ್ಕನುಗುಣವಾಗಿ ಮುದ್ರಣ ಮಾಡಿಕೊಡುತ್ತಿದ್ದೇವೆ. ಮುಖವಾಡ, ಟೋಪಿ, ಟೀ ಶರ್ಟ್‌ಗಳಿಗೆ ಹೆಚ್ಚು ಬೇಡಿಕೆ ಇದೆ.
-ಮುರುಗನ್, ಮಾರಾಟಗಾರರು
ರಾಯಣ್ಣ ಬ್ರಿಗೇಡ್ ಜೀವಂತವಾಗಿದೆ. ಸದ್ಯಕ್ಕೆ ಯಾವುದೇ ಕಾರ್ಯಚಟುವಟಿಕೆ ಇಲ್ಲ. ಬ್ರಿಗೇಡ್ ಬೆಂಬಲಿಸಿದವರಿಗೆ ತೊಂದರೆ, ಅತಂತ್ರತೆಯಿಲ್ಲ. ರಾಜಕಾರಣಕ್ಕೆ ಸಂಘಟನೆ ಬಳಸಿಲ್ಲ. ನಾನು ಬಿಜೆಪಿಯಿಂದ ಸ್ಪರ್ಧಿಸಲು ಉತ್ಸುಕನಾಗಿದ್ದೇನೆ.
-ಕೆ.ವಿರೂಪಾಕ್ಷಪ್ಪ, ಮಾಜಿ ಸಂಸದ, ರಾಯಣ್ಣ ಬ್ರಿಗೇಡ್ ರಾಜ್ಯಾಧ್ಯಕ್ಷ
ಗುತ್ತೇದಾರ್‌ರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಸಿಎಂ ಮತ್ತು ನಾನು ಸಾಕಷ್ಟು ಯತ್ನಿಸಿದೆವು. ಆದರೆ, ಅವರು ಪಕ್ಷ ತೊರೆಯುವ ಮುನ್ನ ಅನಗತ್ಯ ಕಾರಣ ನೀಡಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಿಗಿರುವುದರಿಂದ ಉಚ್ಚಾಟನೆ ಮಾಡಲಾಯಿತು. ಪಕ್ಷ ತೊರೆಯಲು ಅವರಿಗೆ ಸಕಾರಣ ಇರಲಿಲ್ಲ.
-ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ
-ಉದಯವಾಣಿ
Comments are closed.