ಕರ್ನಾಟಕ

24 ತಾಸಿನೊಳಗೆ ರೈತರ ಸಾಲ ಮನ್ನಾ: ಕುಮಾರಸ್ವಾಮಿ ವಚನ

Pinterest LinkedIn Tumblr


ದಾವಣಗೆರೆ: ಮುಂದಿನ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ಎಲ್ಲ ರೀತಿಯ ಸಾಲ ಮನ್ನಾ ಮಾಡಲಾಗುವುದು, ಸ್ತ್ರೀ‌ ಶಕ್ತಿ ಸಂಘದ ಸಾಲವನ್ನೂ ಮನ್ನಾ ಮಾಡಲಾಗುವುದು. ಈ ಅವಕಾಶವನ್ನು ಜನತೆ ನಮ್ಮ ಪಕ್ಷಕ್ಕೆ ನೀಡಬೇಕು ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ವಿನಂತಿಸಿಕೊಂಡಿದ್ದಾರೆ.

ದಾವಣಗೆರೆ ಜಿಲ್ಲೆಯ ಮಾಯಕೊಂಡ ವಿಧಾನಸಭೆ ಕ್ಷೇತ್ರದ ಅಣಜಿ ಗ್ರಾಮದಲ್ಲಿ ಶನಿವಾರ ನಡೆದ ವಿಕಾಸಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಿಎಂ ಸಿದ್ದರಾಮಯ್ಯ ಸಹಕಾರಿ ಬ್ಯಾಂಕ್ ಗಳ 50 ಸಾವಿರದವರೆಗೆ ಸಾಲ ಮನ್ನಾ ಮಾಡಿದ್ದಾರೆ. ಆದರೆ ಈ ಸಂಬಂಧ 8 ಸಾವಿರ ಕೋಟಿ ರೂ. ಗೂ ಹೆಚ್ಚಿನ ಹಣವನ್ನು ಸರಕಾರ ನೀಡಬೇಕು. ಆದರೆ ಸಿಎಂ ಸಿದ್ದರಾಮಯ್ಯ ಜೂನ್‌ನಲ್ಲಿ ಹಣ ನೀಡುವುದಾಗಿ ಹೇಳಿದ್ದಾರೆ. ಈಗ ಚುನಾವಣೆ ಬಂದಿದ್ದು, ಇದು ಸಾಧ್ಯವೇ ಎಂದು ಪ್ರಶ್ನಿಸಿದರು.

ಇನ್ನು ಕೆಲ ರೈತರು ಚಿನ್ನ ಅಡವಿಟ್ಟು ಮೊದಲೇ ಸಾಲ ತೀರಿಸಿದ್ದರು. ಅವರಿಗೀಗ ಹೊಸ ಸಾಲ ಸಿಗದೆ ಸಮಸ್ಯೆಯಾಗಿದೆ ಎಂದರು.

ಜನರ ಮೇಲೆ ಹೊರೆ…
ಸಿದ್ದರಾಮಯ್ಯ ಸರಕಾರ ಐದು ವರ್ಷದಲ್ಲಿ 1.45 ಲಕ್ಷ ಕೋಟಿ ರೂ. ಸಾಲ ಮಾಡಿದೆ. ಈಗ ಒಟ್ಟು ರಾಜ್ಯ ಸರಕಾರದ ಸಾಲ 2.50 ಲಕ್ಷ ಕೋಟಿಯಾಗಿದ್ದು, ಈ ಸರಕಾರ ಜನರ ಮೇಲೆ ಸಾಲದ ಹೊರೆ ಹೊರಿಸಿದೆ ಎಂದು ಆರೋಪಿಸಿದರು.

ಜನಪರ ಸರಕಾರ…
ಜೆಡಿಎಸ್ ಅಧಿಕಾರಕ್ಕೆ ಬಂದರೆ ಅದು ಜನರ ಸರಕಾರ ಆಗಲಿದೆ. ಐಎಎಸ್ ಆಧಿಕಾರಿಗಳನ್ನು ಕೇಳಿ ಸರಕಾರ ಮಾಡುವುದಿಲ್ಲ, ಜನರನ್ನು ಕೇಳಿ ಅವರಿಗೆ ಏನು ಬೇಕೋ ಅದನ್ನು ಕೊಡಲಾಗುವುದು. ಪ್ರತಿ ತಿಂಗಳು ಪ್ರಗತಿಪರ ರೈತರು, ಜನರನ್ನು ವಿಧಾನಸೌಧಕ್ಕೆ ಕರೆಸಿ ಅವರಿಗೆ ಬೇಕಾಗಿರುವುದನ್ನು ತಿಳಿದುಕೊಳ್ಳುವುದರ ಜತೆ ಸರಕಾರದ ಯೋಜನೆಗಳು ಜನರಿಗೆ ತಲುಪುತ್ತಿವೆಯೇ ಇಲ್ಲವೇ ತಿಳಿದುಕೊಂಡು ಜನರ ಮೂಲಕ ಆಡಳಿತ ನಡೆಸಲಾಗುವುದು ಎಂದು ಹೇಳಿದರು.

ಮೈಸೂರಿನಲ್ಲಿ ಚುನಾವಣಾ ಅಕ್ರಮ…
ಮೈಸೂರಿನಲ್ಲಿ ಸಿಎಂ ಚುನಾವಣಾ ಅಕ್ರಮ ನಡೆಸುತ್ತಿದ್ದರೂ ಚುನಾವಣಾ ಆಯೋಗ ಕಣ್ಣುಮುಚ್ಚಿ ಕುಳಿತಿದೆ. ಸಿಎಂ ಹಿಂದೆ ಒಂದು ತಂಡ ಬಿಟ್ಟರೆ ಈ ಅಕ್ರಮ ಹೊರಬರಲಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಸಿಎಂ ಅಕ್ರಮವಾಗಿ ಸಂಪಾದಿಸಿದ ಹಣವನ್ನು ಚುನಾವಣಾ ಅಕ್ರಮಕ್ಕೆ ಬಳಸುತ್ತಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಡುಗೆ, ತಿಂಡಿಗಳನ್ನು ಪೊಲೀಸ್ ವಾಹನದಲ್ಲಿಯೇ ಸಾಗಿಸಲಾಗುತ್ತಿದೆ. ಹಣವೂ ಹರಿದಾಡುತ್ತಿದೆ. ನಾಮಕಾವಸ್ಥೆಗೆ 2, 3 ಲಕ್ಷ ರೂ.ಗಳನ್ನು ಹಿಡಿಯುತ್ತಿದ್ದಾರೆ ಎಂದರು.

ಮೈತ್ರಿ…
ನಾವು ಬಿಎಸ್ಪಿ ಜತೆ ಮೈತ್ರಿ ಮಾಡಿಕೊಂಡಿದ್ದು 20 ಸೀಟ್ ಅವರಿಗೆ ನೀಡಲಾಗಿದೆ. ಎನ್‌ಸಿಪಿ ಜತೆ ಹೊಂದಾಣಿಕೆ ಮಾತುಕತೆಯಿತ್ತು. ಆದರೆ ಅವರು ಎಂಇಎಸ್ ಜತೆ ಮೈತ್ರಿಗೆ ಮುಂದಾಗಿರುವುದರಿಂದ ನಾವು ಹಿಂದೆ ಸರಿದಿದ್ದೇವೆ ಎಂದರು.

Comments are closed.