ಕರ್ನಾಟಕ

ಈಶ್ವರಪ್ಪ ನಿವಾಸದಲ್ಲಿ ಶಾ ಡಿನ್ನರ್‌: BJP ಟಿಕೆಟ್‌ ಗೊಂದಲಕ್ಕೆ ತೆರೆ?

Pinterest LinkedIn Tumblr


ಶಿವಮೊಗ್ಗ: ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜ್ಯ ಪ್ರವಾಸದಲ್ಲಿದ್ದು ಚುನಾವಣಾ ರಣತಂತ್ರಗಳನ್ನು ರೂಪಿಸುತ್ತಿದ್ದಾರೆ. ಬಿ.ಎಸ್‌.ಯಡಿಯೂರಪ್ಪ ತವರು ಜಿಲ್ಲೆ ಯಲ್ಲಿ ಸೋಮವಾರ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿರುವ ಶಾ ಅವರು ರಾತ್ರಿ ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ ಅವರ ನಿವಾಸದಲ್ಲಿ ಭೋಜನಕೂಟದಲ್ಲಿ ಭಾಗಿಯಾಗಲಿದ್ದಾರೆ.

ಅಮಿತ್‌ ಶಾ ಅವರಿಗಾಗಿ ಸಿದ್ದಪಡಿಸಲಾದ ವಿಶೇಷ ಭೋಜನ ಕೂಟದಲ್ಲಿ ಬಿಎಸ್‌ವೈ ಹಾಗೂ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ‌ ಕೆಲ ಪ್ರಮುಖ ಮುಖಂಡರು ಭೋಜನ ಸವಿಯಲಿದ್ದಾರೆ.

ಟಿಕೆಟ್‌ ಗೊಂದಲ ಅಂತ್ಯ ?
ಭೋಜನ ಕೂಟದ ಜೊತೆಗೆ ಪಕ್ಷದಲ್ಲಿನ ಭಿನ್ನಮತ ಮತ್ತು ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್‌ ಗೊಂದಲಕ್ಕೆ ಅಂತ್ಯ ಹಾಡುವ ಸಾಧ್ಯತೆಗಳಿವೆ. ಬಿಜೆಪಿ ಜಿಲ್ಲಾಧ್ಯಕ್ಷ ಕಳೆದ ಬಾರಿಯ ಕೆಜೆಪಿ ಪರಾಜಿತ ಅಭ್ಯರ್ಥಿ ರುದ್ರೇಗೌಡ ಮತ್ತು ಈಶ್ವರಪ್ಪ ಅವರ ನಡುವೆ ಟಿಕೆಟ್‌ಗಾಗಿ ಪೈಪೋಟಿ ಏರ್ಪಟ್ಟಿದೆ.

ಕವಿಶೈಲಕ್ಕೆ ಭೇಟಿ

ಮಧ್ಯಾಹ್ನ ತೀರ್ಥಹಳ್ಳಿಯಲ್ಲಿ ಕುವೆಂಪು ಸಮಾಧಿ ಕವಿಶೈಲಕ್ಕೆ ಭೇಟಿ ನೀಡಿದ ಅಮಿತ್‌ ಶಾ ಪುಷ್ಪ ನಮನ ಸಲ್ಲಿಸಿದರು.

ತೀರ್ಥಹಳ್ಳಿಯ ಸಾರ್ವಜನಿಕ ಕ್ರೀಡಾಂಗಣದಲ್ಲಿ ಮಧ್ಯಾಹ್ನ ಅಡಕೆ ಬೆಳೆಗಾರರ ಸಮಾವೇಶದಲ್ಲಿ ಪಾಲ್ಗೊಂಡಿರುವ ಅವರು ಸಂಜೆ ಶಿವಮೊಗ್ಗ ನಗರದಲ್ಲಿ ರೋಡ್‌ಶೋ ನಡೆಸಲಿದ್ದಾರೆ. ಬಳಿಕ ವಾಣಿಜ್ಯೋದ್ಯಮಿಗಳ ಜೊತೆ ಸಂವಾದ ನಡೆಸಲಿದ್ದಾರೆ.ನಂತರ ಬೆಕ್ಕಿನಕಲ್ಮಠದಲ್ಲಿ ಜಿಲ್ಲೆಯ ವಿವಿಧ ಸಾಧುಸಂತರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.

ಇದೇ ಪ್ರಪ್ರಥಮ ಬಾರಿಗೆ ಶಾ ಶಿವಮೊಗ್ಗಕ್ಕೆ ಆಗಮಿಸಿದ್ದು ಎಲ್ಲೆಡೆ ಬ್ಯಾನರ್‌, ಬಂಟಿಂಗ್ಸ್‌, ಹೋರ್ಡಿಂಗ್‌ಗಳು ರಾರಾಜಿಸುತ್ತಿದ್ದು ನಗರ ಸಂಪೂರ್ಣವಾಗಿ ಕೇಸರಿಮಯವಾಗಿದೆ.

-ಉದಯವಾಣಿ

Comments are closed.