ಕರ್ನಾಟಕ

ಹೂಡಿಕೆ ಹೆಸರಲ್ಲಿ ರಾಹುಲ್‌ ದ್ರಾವಿಡ್‌, ಸೈನಾ, ಪಡುಕೋಣೆಗೂ ಮೋಸ: ಐವರ ಬಂಧನ

Pinterest LinkedIn Tumblr

ಬೆಂಗಳೂರು: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭಾಂಶ ಕೊಡಿಸುವುದಾಗಿ ಕ್ರೀಡಾಪಟುಗಳು, ರಾಜಕಾರಣಿಗಳು ಹಾಗೂ ಉದ್ಯಮಿಗಳಿಂದ ಕೋಟ್ಯಂತರ ರೂಪಾಯಿ ಪಡೆದು ವಂಚಿಸಿರುವ ಜಾಲವನ್ನು ಪೊಲೀಸರು ಭೇದಿಸಿದ್ದಾರೆ.

‘ಕ್ರೀಡೆ, ಸಿನಿಮಾ, ರಾಜಕೀಯ ಹಾಗೂ ವಾಣಿಜ್ಯ ಕ್ಷೇತ್ರಗಳ 800ಕ್ಕೂ ಹೆಚ್ಚು ಗಣ್ಯ ವ್ಯಕ್ತಿಗಳನ್ನು ಆರೋಪಿಗಳು ವಂಚಿಸಿರುವುದು ಗೊತ್ತಾಗಿದೆ. ವಂಚನೆಗೀಡಾದವರ ಪಟ್ಟಿಯಲ್ಲಿ ಕ್ರಿಕೆಟಿಗ ರಾಹುಲ್‌ ದ್ರಾವಿಡ್‌, ಬ್ಯಾಡ್ಮಿಂಟನ್ ಆಟಗಾರರಾದ ಸೈನಾ ನೆಹ್ವಾಲ್ ಹಾಗೂ ಪ್ರಕಾಶ್‌ ಪಡುಕೋಣೆ ಸೇರಿದಂತೆ ಹಲವರಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ವಂಚನೆ ಬಗ್ಗೆ ‘ಬಾಲಾಜಿ ಅಗರಬತ್ತಿ ಕಂಪನಿ’ ಮಾಲೀಕ ಪಿ.ಆರ್. ಬಾಲಾಜಿ ನೀಡಿದ್ದ ದೂರಿನನ್ವಯ ತನಿಖೆ ಕೈಗೊಂಡಿದ್ದ ಬನಶಂಕರಿ ಠಾಣೆಯ ಪೊಲೀಸರು, ಬೆಂಗಳೂರಿನ ‘ವಿಕ್ರಮ್ ಇನ್‌ವೆಸ್ಟ್‌ಮೆಂಟ್‌ ಕಂಪನಿ’ ಮಾಲೀಕ ರಾಘವೇಂದ್ರ ಶ್ರೀನಾಥ್, ಏಜೆಂಟರಾದ ಸೂತ್ರಂ ಸುರೇಶ್‌, ನರಸಿಂಹಮೂರ್ತಿ, ಕೆ.ಸಿ.ನಾಗರಾಜ್ ಹಾಗೂ ಪ್ರಹ್ಲಾದ್‌ ಅವರನ್ನು ಬಂಧಿಸಿದ್ದಾರೆ.

‘ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, 14 ದಿನಗಳವರೆಗೆ ಕಸ್ಟಡಿಗೆ ಪಡೆದಿದ್ದೇವೆ. ಈ ಜಾಲವು ಇದುವರೆಗೂ ₹300 ಕೋಟಿಯಷ್ಟು ವಂಚನೆ ಮಾಡಿರುವ ಮಾಹಿತಿ ಇದೆ. ಅದಕ್ಕೆ ಸಂಬಂಧಪಟ್ಟ ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

‘ಆರೋಪಿಗಳು ಹೂಡಿಕೆದಾರರ ಹೆಸರುಗಳನ್ನು ಬಾಯ್ಬಿಟ್ಟಿದ್ದಾರೆ. ಆ ಹೂಡಿಕೆದಾರರ ಬ್ಯಾಂಕ್‌ ಖಾತೆಗಳನ್ನು ಪರಿಶೀಲಿಸಿದ ಬಳಿಕವೇ ನಿಖರ ಮಾಹಿತಿ ಸಿಗಲಿದೆ. ಅದಕ್ಕಾಗಿ ಸಂಬಂಧಪಟ್ಟ ಬ್ಯಾಂಕ್‌ ಅಧಿಕಾರಿಗಳನ್ನು ಸಂಪರ್ಕಿಸುತ್ತಿದ್ದೇವೆ’ ಎಂದರು.

ಆರೋಪಿ ಎಂಜಿನಿಯರಿಂಗ್‌ ಪದವೀಧರ: ಬನಶಂಕರಿಯಲ್ಲಿ ವಾಸವಿರುವ ರಾಘವೇಂದ್ರ, ಎಂಜಿನಿಯರಿಂಗ್‌ ಪದವೀಧರ. ‘ವಿಕ್ರಮ್ ಇನ್‌ವೆಸ್ಟ್‌ಮೆಂಟ್‌ ಕಂಪನಿ’ ಆರಂಭಿಸಿದ್ದ ಅವರು, ಯಶವಂತಪುರದಲ್ಲಿ ಮುಖ್ಯ ಕಚೇರಿ ತೆರೆದಿದ್ದರು. ಬನಶಂಕರಿಯ 2ನೇ ಹಂತದಲ್ಲಿ ಕಂಪನಿಯ ಶಾಖೆ ಹೊಂದಿದ್ದರು. ಹೆಚ್ಚಿನ ಕಮಿಷನ್ ನೀಡುವುದಾಗಿ ಹೇಳಿ ಏಜೆಂಟರನ್ನು ನೇಮಕಮಾಡಿಕೊಂಡಿದ್ದರು. ಅವರ ಮೂಲಕ ಗಣ್ಯ ವ್ಯಕ್ತಿಗಳನ್ನು ಸಂಪರ್ಕಿಸುತ್ತಿದ್ದರು. ನಂತರ, ಹೆಚ್ಚಿನ ಲಾಭಾಂಶದ ಆಸೆ ಹುಟ್ಟಿಸಿ ಹಣ ಹೂಡಿಕೆಗೆ ಪ್ರೇರೇಪಿಸುತ್ತಿದ್ದರು.

2016ರಲ್ಲಿ ಕಂಪನಿ ಬಗ್ಗೆ ತಿಳಿದುಕೊಂಡಿದ್ದ ಬಾಲಾಜಿ ಹಾಗೂ ಅವರ ತಮ್ಮ ಭಾಸ್ಕರ್, ಏಜೆಂಟ್ ನರಸಿಂಹ ಮೂರ್ತಿ ಅವರನ್ನು ಜಯನಗರದ ಹೋಟೆಲ್‌ನಲ್ಲಿ ಭೇಟಿಯಾಗಿದ್ದರು. ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಕೊಡಿಸುವುದಾಗಿ ಆಶ್ವಾಸನೆ ನೀಡಿದ್ದ ನರಸಿಂಹ ಮೂರ್ತಿ, ರಾಘವೇಂದ್ರ ಅವರನ್ನೂ ಈ ಸಹೋದರರಿಗೆ ಪರಿಚಯ ಮಾಡಿಸಿದ್ದರು.

ಅವರಿಬ್ಬರ ಮಾತು ನಂಬಿದ್ದ ಸಹೋದರರು, ‘ಬಾಲಾಜಿ ಅಗರಬತ್ತಿ ಕಂಪನಿ’ ಖಾತೆಯಿಂದ ₹11.20 ಕೋಟಿ ಹಾಗೂ ಭಾಸ್ಕರ್‌ ಖಾತೆಯಿಂದ ₹54 ಲಕ್ಷ ಹಣವನ್ನು ಕಂಪನಿಯಲ್ಲಿ ಹೂಡಿಕೆ ಮಾಡಿದ್ದರು. ವರ್ಷ ಕಳೆದರೂ ಕಂಪನಿಯಿಂದ ಹಣ ವಾಪಸ್‌ ಬಂದಿರಲಿಲ್ಲ. ಅಸಲನ್ನಷ್ಟೇ ಮಾತ್ರ ಕೊಡಿ ಎಂದರೂ ರಾಘವೇಂದ್ರ ಕೊಟ್ಟಿರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದರು.

ಹಣ ಕೊಟ್ಟಿದ್ದ ಕ್ರೀಡಾಪಟುಗಳು
ಬಂಧಿತ ಆರೋಪಿ ಸೂತ್ರಂ ಸುರೇಶ್, ಇಂಗ್ಲಿಷ್‌ ಪತ್ರಿಕೆಯೊಂದರಲ್ಲಿ ಕ್ರೀಡಾ ಪತ್ರಕರ್ತರಾಗಿ ಕೆಲಸ ಮಾಡಿದ್ದರು. ದೇಶ ಹಾಗೂ ಅಂತರಾಷ್ಟ್ರೀಯ ಕ್ರೀಡಾಪಟುಗಳ ಪರಿಚಯ ಅವರಿಗಿತ್ತು. ಕೆಲ ವರ್ಷಗಳ ಹಿಂದೆ ಪತ್ರಿಕೆಗೆ ರಾಜೀನಾಮೆ ನೀಡಿದ್ದ ಅವರು, ವಿಮಾ ಏಜೆಂಟರಾಗಿ ಮುಂದುವರಿದಿದ್ದರು. ಅದೇ ವೇಳೆ ಅವರಿಗೆ ರಾಘವೇಂದ್ರ ಅವರ ಪರಿಚಯವಾಗಿತ್ತು.

ಸೂತ್ರಂ ಸುರೇಶ್

ಕ್ರೀಡಾಪಟುಗಳಿಂದ ಹಣ ಹೂಡಿಕೆ ಮಾಡಿಸಿದರೆ ಹೆಚ್ಚಿನ ಕಮಿಷನ್‌ ನೀಡುವುದಾಗಿ ರಾಘವೇಂದ್ರ ಹೇಳಿದ್ದರು. ಅದರಂತೆ ಸುರೇಶ್, ಪರಿಚಯಸ್ಥ ಕ್ರೀಡಾಪಟುಗಳನ್ನು ಸಂಪರ್ಕಿಸಿ, ಹೂಡಿಕೆ ಮಾಡಿಸಿದ್ದರು. ಅಂಥ ಕ್ರೀಡಾಪಟುಗಳ ಪೈಕಿ ಹಲವರಿಗೆ ಇದುವರೆಗೂ ಹಣ ವಾಪಸ್‌ ಕೊಡದಿರುವುದು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ವಿವರಿಸಿದರು.

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ
‘ಸಂಗ್ರಹಿಸಿದ್ದ ಹಣವನ್ನು ನಾವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದೇವೆ. ಅದರಲ್ಲಿ ಲಾಭಾಂಶ ಬಂದಾಗಲೆಲ್ಲ ಹೂಡಿಕೆದಾರರಿಗೆ ಹಣ ಕೊಟ್ಟಿದ್ದೇವೆ. ಎರಡು ವರ್ಷಗಳಿಂದ ಲಾಭಾಂಶವೇ ಬಂದಿಲ್ಲ. ಹೀಗಾಗಿ, ಹಣ ವಾಪಸ್‌ ನೀಡಲು ಸಾಧ್ಯವಾಗಿಲ್ಲ’ ಎಂದು ಆರೋಪಿಗಳು ಹೇಳಿಕೊಂಡಿರುವುದಾಗಿ ಪೊಲೀಸರು ತಿಳಿಸಿದರು.

‘ಹೂಡಿಕೆದಾರರ ಹಣದಲ್ಲೇ ಆರೋಪಿಗಳು, ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಅವರ ಆಸ್ತಿಗಳ ಮಾಹಿತಿ ಕಲೆಹಾಕುತ್ತಿದ್ದೇವೆ. ಅವುಗಳನ್ನು ಜಪ್ತಿ ಮಾಡುವ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆಯುತ್ತಿದ್ದೇವೆ’ ಎಂದರು.

Comments are closed.