ಅಥಣಿ: ಪ್ರಧಾನಿ ಮಂತ್ರಿಯ ಕಣ್ಣೆದುರಲ್ಲೇ ಲಲಿತ್ ಮೋದಿ ಹಾಗೂ ನೀರವ್ ಮೋದಿ ಸಾರ್ವಜನಿಕರ ಹಣ ಲಪಟಾಯಿಸಿ ಪರಾರಿಯಾಗಿದ್ದಾರೆ.ಕೇಂದ್ರಸರ್ಕಾರದ ಪ್ರಭಾವವಿಲ್ಲದೆ ಒಬ್ಬ ವ್ಯಕ್ತಿ ಹೇಗೆ ಅಂತಹ ದೊಡ್ಡ ಪ್ರಮಾಣದ ಹಣಕಾಸು ವಂಚಿಸಲು ಸಾಧ್ಯ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ನಡೆದ ಜನಾರ್ಶೀವಾದ ಯಾತ್ರೆಯಲ್ಲಿ ಮಾತನಾಡಿದ ಅವರು,ಐಪಿಎಲ್ ಹಣದೋಚಿ ಲಲಿತ್ ಮೋದಿ ದೇಶತೊರೆದಿದ್ದ,ಇದೀಗ ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ಸಾರ್ವಜನಿಕರ ಹಣ ದೋಚಿ ನೀರವ್ ಮೋದಿ ದೇಶದಿಂದ ಓಡಿ ಹೋಗಿದ್ದಾನೆ. ಪ್ರಧಾನಮಂತ್ರಿಯ ಪರೋಕ್ಷ ಬೆಂಬಲವಿಲ್ಲದೆ ಈ ಘಟನೆ ನಡೆದಿರಲೂ ಸಾಧ್ಯವೇ ಇಲ್ಲ ಎಂದರು.
ಲಲಿತ್ ಮೋದಿ, ನೀರವ್ ಮೋದಿ ನಂತರ ಇದೀಗ ಪ್ರಧಾನಿ ನರೇಂದ್ರಮೋದಿ ಯಾವಾಗ ದೇಶ ಬಿಡುತ್ತಾರೆ ಎಂದು ಜನ ಯೋಚಿಸುತ್ತಿದ್ದಾರೆ.ಮೋದಿ ದೇಶ ತೊರೆದರೂ ಆಶ್ಚರ್ಯವಿಲ್ಲಾ. ಹೈಟೆಕ್ ಭ್ರಷ್ಟಾಚಾರಕ್ಕೆ ಮೋದಿ ಉದಾಹರಣೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ರಾಜ್ಯದಲ್ಲಿ ಭ್ರಷ್ಟಾಚಾರ ನಡೆದಿದ್ದರೇ ಸಾಕ್ಷ್ಯ ತೋರಿಸಲಿ ಎಂದು ಸವಾಲು ಹಾಕಿದ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರಮೋದಿ ದೇಶದ ಜನತೆಗೆ ನೀಡಿದಭರವಸೆ ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಅಪಾದಿಸಿದರು.
ಶ್ರವಣಬೆಳಗೊಳದಲ್ಲಿನ ಮಹಾಮಸ್ತಾಕಭಿಷೇಕ ಕಾರ್ಯಕ್ರಮಕ್ಕೆ ಕೇಂದ್ರಸರ್ಕಾರದಿಂದ ನಯಾ ಪೈಸೆ ಬಿಡುಗಡೆ ಮಾಡಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.