ಬೆಂಗಳೂರು: ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರನ ಹಲ್ಲೆ ಪ್ರಕರಣ ತೀವ್ರ ಸದ್ದು ಮಾಡುತ್ತಿರುವ ವೇಳೆಯಲ್ಲೇ ನಗರದ ಇನ್ನೋರ್ವ ಪ್ರಭಾವಿ ಕಾಂಗ್ರೆಸ್ ಶಾಸಕ ಎಸ್.ಟಿ. ಸೋಮಶೇಖರ್ ಅವರ ಬೆಂಬಲಿಗರು ದ್ವೇಷದಲ್ಲಿ ಗುಂಪು ದಾಳಿ ನಡೆಸಿದ ಆರೋಪ ಕೇಳಿ ಬಂದಿದೆ.
ತಿಗಳರ ಪಾಳ್ಯದಲ್ಲಿ ಘಟನೆ ನಡೆದಿದ್ದು,ಹಳೆ ದ್ವೇಷ ಮತ್ತು ಮನೆ ಮನೆಗೆ ಕಾಂಗ್ರೆಸ್ ಸಮಾವೇಶ ನಡೆಸಲು ಜಾಗ ಕೊಡಲಿಲ್ಲ ಎಂಬ ಕಾರಣಕ್ಕೆ ಜೋಗಣ್ಣ ಗೌಡ ಎನ್ನುವವರನ್ನು ಗುರಿಯಾಗಿರಿಸಿ ಕೊಂಡು ಶಾಸಕ ಸೋಮಶೇಖರ್ ಅವರ 20 ಕ್ಕೂ ಹೆಚ್ಚು ಬೆಂಬಲಿಗರು ಲಾಂಗು,ಮಚ್ಚು, ದೊಣ್ಣೆಗಳಿಂದ
ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಜೋಗಣ್ಣ ತಪ್ಪಿಸಿಕೊಂಡು ಮನೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ. ಈ ವೇಳೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ,ಕೊಲೆ ಬೆದರಿಕೆ ಹಾಕಿದ್ದು, ಮನೆಗೆ ಕಲ್ಲೂ ತೂರಾಟ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಬಳಿಕ ಪ್ರಕಾಶ್ ಎನ್ನುವ ಕೆಲಸಗಾರನ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ. ಪ್ರಕಾಶ್ ಇದೀಗ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳದಲ್ಲಿದ್ದ ಮಹೇಶ್, ಚಿಕ್ಕಣ್ಣ ಅವರ ಮೇಲೂ ದಾಳಿ ನಡೆಸಲು ಮುಂದಾಗಿದ್ದಾರೆ.
ಪೊಲೀಸರಿಗೆ ದೂರು ನೀಡಲಾಗಿದ್ದು, ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎಂಬ ಆರೋಪವನ್ನೂ ಜೋಗಣ್ಣ ಮಾಡಿದ್ದಾರೆ.
ಎಸ್.ಟಿ.ಸೋಮಶೇಖರ್ ಅವರು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ‘ಕಳೆದ 40 ವರ್ಷಗಳಿಂದ ನಾನು ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ರೌಡಿಸಂ ಮಾಡುವವನು ನಾನಲ್ಲ. ಇದು ಸ್ಥಳೀಯರ ನಡುವೆ ನಡೆದ ಜಗಳ,ಚುನಾವಣೆ ವೇಳೆ ನನ್ನನ್ನು ಗುರಿಯಾಗಿರಿಸಿ ಆರೋಪ ಮಾಡಲಾಗಿದೆ.ನನ್ನದು ತಪ್ಪು ಕಂಡು ಬಂದರೆ ರಾಜಕೀಯ ನಿವೃತ್ತಿ ಪಡೆಯಲೂ ಸಿದ್ಧ.ಇದೆಲ್ಲಾ ಕೆಲ ಜೆಡಿಎಸ್ ನಾಯಕರು ಮಾಡಿರುವ ಸಂಚು’ ಎಂದಿದ್ದಾರೆ.
-ಉದಯವಾಣಿ